cyber crime 
ಬೆಂಗಳೂರು

ಐಟಿ ಕಂಪನಿ ಮೇಲೆ ಸೈಬರ್ ದಾಳಿ, ಗೌಪ್ಯ ಡೇಟಾ ಕಳ್ಳತನ

₹5 ಕೋಟಿ, 30 ಬಿಟ್‌ಕಾಯಿನ್ ಕೊಡದಿದ್ದರೆ ಮಾಹಿತಿ ಸೋರಿಕೆ ಮಾಡುವ ಬೆದರಿಕೆ, ಕಂಪನಿ ಸಿಬ್ಬಂದಿಯಿಂದಲೇ ಕೃತ್ಯ ಶಂಕೆ, ವೈಟ್‌ಫಿಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಪ್ರತಿಷ್ಠಿತ ಐಟಿ ಕಂಪನಿಯೊಂದರ ಮೇಲೆ ಹ್ಯಾಕರ್ ಗ್ಯಾಂಗ್ ಸೈಬರ್ ದಾಳಿ ನಡೆಸಿ, ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಮಹದೇವಪುರದ ಮ್ಯಾಕ್ಸ್‌ವಲ್ ಐಪಿ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಈ ಆಘಾತ ಎದುರಾಗಿದ್ದು, ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಕೃಷ್ಣನ್ ಸುಕುಮಾರನ್ ನೀಡಿದ ದೂರಿನ ಮೇರೆಗೆ ಹೈದರಾಬಾದ್ ಮೂಲದ ಶಿವರಾಮ್ ನೆಕ್ಕಲಪುಡಿ ಎಂಬುವವರ ವಿರುದ್ಧ ವೈಟ್‌ಫೀಲ್ಡ್ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೆ.19ರಂದು ಹ್ಯಾಕರ್‌ಗಳು, ಕಂಪನಿಯ ಸಿಸ್ಟಂನಲ್ಲಿದ್ದ ಎಲ್ಲ ಡೇಟಾವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ‘ನಮಗೆ 10 ರಿಂದ 30 ಬಿಟ್‌ಕಾಯಿನ್ ನೀಡಬೇಕು, ಇಲ್ಲದಿದ್ದರೆ ನಿಮ್ಮ ಗ್ರಾಹಕರ ಡೇಟಾವನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುತ್ತೇವೆ. ಜತೆಗೆ ಕಂಪನಿ ಪ್ರಾಡಕ್ಟ್ ಸೋರ್ಸ್ ಕೋಡ್ ಸೋರಿಕೆ ಮಾಡುತ್ತೇವೆ ಎಂದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದರು.

ಆರೋಪಿಗಳು ಮೊದಲು 2.75 ಕೋಟಿ ರೂ, ನಂತರ 2.25 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಬೇಡಿಕೆ ಇಟ್ಟು, ಕಡೆಗೆ ಬಿಟ್‌ಕಾಯಿನ್‌ನಲ್ಲಿ ಹಣ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಂಪನಿ ಸಿಬ್ಬಂದಿಯಿಂದಲೇ ಕೃತ್ಯ: ಸೈಬರ್ ದಾಳಿ ಕೃತ್ಯ ನಡೆದ ಬಳಿಕ ಕಂಪನಿಯ ಇಂಟರ್ನಲ್ ಸಬ್ ಕಮಿಟಿ ಪರಿಶೀಲನೆ ವೇಳೆ ಕಂಪನಿ ಸಿಬ್ಬಂದಿ ಶಿವರಾಮ್ ನೆಕ್ಕಲಪುಡಿ ಮತ್ತು ಆತನ ಅಧೀನ ಸಿಬ್ಬಂದಿಯಾದ ಬಿಸ್ವಜಿತ್ ಮತ್ತು ನಿಖಿಲ್ ಸೇರಿ ಕೃತ್ಯ ಎಸಗಿರುವುದು ಕಂಡು ಬಂದಿದೆ. ಸೈಬರ್ ಪೊಲೀಸರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.