fire-safety-system 
ಬೆಂಗಳೂರು

ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ
  • ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆ
ಬೆಂಗಳೂರು: ಮಹಾನಗರದ ಪೇಟೆ ಪ್ರದೇಶ ಹಾಗೂ ಇತರ ಸೂಕ್ಷ್ಮಪ್ರದೇಶಗಳಲ್ಲಿರುವ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳೊಂದಿಗೆ ಶುಕ್ರವಾರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ನಗರದ ವಿವಿಧ ಪ್ರದೇಶಗಳಲ್ಲಿ ಕಡ್ಡಾಯವಾಗಿ ಫೈರ್ ಸೇಫ್ಟಿ ಆಡಿಟ್ ನಡೆಸಬೇಕು. ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೊಸದಾಗಿ ನಿರ್ಮಿಸುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ವೇಳೆ ನೀರಿನ ಲಭ್ಯತೆಗಾಗಿ ಅಗ್ನಿಶಾಮಕ ಹೈಡ್ರೆಂಟ್‌ಗಳನ್ನು ಅಳವಡಿಸಬೇಕು. ಇವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ಜತೆಗೆ ಪ್ರತಿ ತಿಂಗಳಿಗೊಮ್ಮೆ ಪರಿಶೀಲಿಸಬೇಕು. ಯಾವುದೇ ದೋಷ ಕಂಡುಬಂದಲ್ಲಿ ತಕ್ಷಣವೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಾಮಫಲಕ ಅಳವಡಿಕೆ ಕಡ್ಡಾಯ:

ಜಲಮಂಡಳಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಹಾಗೂ ರಸ್ತೆ ಪುನಶ್ಚೇತನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಹಾಗಾಗಿ ಜಲಮಂಡಳಿಯು ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಿ ಕೆಲಸ ಮಾಡಬೇಕು. ರಸ್ತೆ ಕತ್ತರಿಸಲು ಅನುಮತಿ ಪಡೆದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಗುಣಮಟ್ಟವನ್ನು ಕಾಪಾಡಿಕೊಂಡು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮನ್ವಯದೊಂದಿಗೆ ಡಾಂಬರೀಕರಣ ಕೈಗೊಳ್ಳಿ:

ನಗರದ ಪ್ರಮುಖ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಎಸ್‌ಐಪಿ ಅನುದಾನದಡಿ ಪ್ರಗತಿಯಲ್ಲಿರುವ ಸಿವಿಲ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಡಾಂಬರೀಕರಣ ಕೈಗೊಳ್ಳಬೇಕು. ಕಾಮಗಾರಿ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಡಾಂಬರೀಕರಣ ಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತ ನಿತೀಶ್, ಬಿಎಸ್‌ಡಬ್ಲುೃಎಂಎಲ್‌ನ ಸಿಇಒ ಕರೀಗೌಡ, ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ಜಲಮಂಡಳಿ, ಬೆಸ್ಕಾಂ, ಕೆ-ರೈಡ್, ಸಂಚಾರ ಪೊಲೀಸ್ ವಿಭಾಗ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಸಿದ್ಧತೆ:

ಆಗಸ್ಟ್ ತಿಂಗಳ ಪೂರ್ತಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವನ್ನು ನಡೆಸಲಾಗುತ್ತಿದೆ. ನಗರ ಪಾಲಿಕೆಗಳು, ಕೆ-ರೈಡ್, ರೈಲ್ವೆ ಹಾಗೂ ಮೆಟ್ರೋ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಟ್ಟಡ ತ್ಯಾಜ್ಯ, ಮಣ್ಣಿನ ರಾಶಿ, ಗಿಡಗಂಟಿಗಳು ಸೇರಿ ಇತರ ತ್ಯಾಜ್ಯ ಇರುವ ಸ್ಥಳಗಳನ್ನು ಗುರುತಿಸಬೇಕು. ಬಳಕೆಯಲ್ಲಿಲ್ಲದ ಕ್ವಾರಿಗಳ ಮಾಹಿತಿ, ನೋಂದಾಯಿತ ಹಾಗೂ ಬಳಕೆಯಲ್ಲಿರುವ ವಾಹನಗಳ ವಿವರ, ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಚರ್ಚೆಯಾದ ಇತರ ಪ್ರಮುಖ ಅಂಶ:

* ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ಕೆ ವೇಗ ನೀಡಬೇಕು
* ಬೀದಿಬದಿ ವ್ಯಾಪಾರಿಗಳಿಗೆ ಹೊಸ ಗುರುತಿನ ಚೀಟಿ ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು
* ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಬೇಕು
* ಸ್ಕೈವಾಕ್‌ಗಳಲ್ಲಿ ಬಳಕೆಯಲ್ಲಿಲ್ಲದ ಲಿಫ್ಟ್‌ಗಳನ್ನು ಬೇಗನೆ ದುರಸ್ತಿಗೊಳಿಸಬೇಕು
* ಕೆ.ಆರ್. ಮಾರುಕಟ್ಟೆಯ ಸೊಪ್ಪು ಮಾರಾಟದ ಸ್ಥಳದಲ್ಲಿ ಕಾಂಕ್ರೀಟ್ ನೆಲಹಾಸು ನಿರ್ಮಿಸಲು ಕ್ರಮ
* ಸಂಪಿಗೆಹಳ್ಳಿ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ.