Darshan 
ಬೆಂಗಳೂರು

ದರ್ಶನ್ ಬೆನ್ನು ನೋವು, ಹೆಚ್ಚಿನ ಚಿಕಿತ್ಸೆಗೆ ಕೋರ್ಟ್ ಅಸ್ತು

ವಿಕ್ಟೋರಿಯಾ ಆಸ್ಪತ್ರೆಗೆ ಕರೆಯೊಯ್ಯುವಂತೆ ಸೂಚನೆ. ನೋವು ಕಡಿಮೆಗಾಗಿ ಅಗತ್ಯ ಕ್ರಮಕ್ಕೆ ಜೈಲಧಿಕಾರಿಗಳಿಗೆ ನಿರ್ದೇಶನ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ನಟ ದರ್ಶನ್‌ಗೆ ಬೆನ್ನು ನೋವು ಕಡಿಮೆಯಾಗದಿದ್ದರೆ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಸೂಚನೆ ನೀಡಿದೆ.

ಗುರುವಾರವೂ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ಅವರು, ದರ್ಶನ್ ಬೆನ್ನು ನೋವು ಕಡಿಮೆ ಮಾಡಲು ಸರಿಯಾದ ಮತ್ತು ಸಕಾಲಿಕ ಔಷಧ ನೀಡಬೇಕೆಂದು ಜೈಲಧಿಕಾರಿಗಳಿಗೆ ನಿರ್ದೇಶಿಸಿ ಆದೇಶಿಸಿದ್ದಾರೆ.

ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ‘ಕಕ್ಷಿದಾರ ದರ್ಶನ್‌ಗೆ 12 ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿದೆ. ಚಳಿಗೆ ನೋವಿನ ತೀವ್ರತೆ ಹೆಚ್ಚಾಗಿದ್ದರಿಂದ ಅವರಿಗೆ ಬಹಳ ತೊಂದರೆ ಆಗುತ್ತಿದೆ. ಜೈಲಿನಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅವರಿಗೆ ಕೊಡಬೇಕಾದ ಎಪಿಡ್ಯೂರಲ್ ಇಂಜಕ್ಷನ್ ಕೊಡುವುದನ್ನು ಜೈಲಿನಲ್ಲಿ ನಿಲ್ಲಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು.

ಕೋರ್ಟ್‌ನ ನಿರ್ದೇಶನದಂತೆ ಈಗಾಗಲೇ 2 ಸಲ ಮಾತ್ರ ಫಿಸಿಯೋ ಥೆರಪಿ ಮಾಡಿದ್ದಾರೆ. ಅವರಿಗೆ ಇನ್ನೂ ನೋವಿದೆ. ಚಿಕಿತ್ಸೆಯ ಅವಶ್ಯವಿದೆ. ಆದರೆ ಜೈಲಿನಲ್ಲಿ ಅವರ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಎಸ್‌ಪಿಪಿ ಪ್ರಸನ್ನ ಕುಮಾರ್ ಗೈರು ಹಿನ್ನೆಲೆ ಅವರ ಜೂನಿಯರ್ ಹಾಜರಾಗಿದ್ದರು. ದರ್ಶನ್‌ಗೆ ನೀಡಿದ್ದ ಚಿಕಿತ್ಸೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಆದರೆ ಆ ವರದಿ ನಮ್ಮ ಕೈ ಸೇರಿಲ್ಲ. ಹಾಗಾಗಿ ಆ ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ದರ್ಶನ್ ಬೆನ್ನು ನೋವು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇ-ಮೇಲ್ ಮೂಲಕ ಜೈಲಧಿಕಾರಿಗಳಿಗೆ ಸೂಚಿಸುವ ಜತೆಗೆ ಆರೋಪಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಬಗ್ಗೆ ಆಕ್ಷೇಪಣೆ ಸಲ್ಲಿಸಲು ನ.30ರ ವರೆಗೆ ಕಾಲಾವಕಾಶ ನೀಡಿದ್ದು, ನ.30ಕ್ಕೆ ವಿಚಾರಣೆಗೆ ಮುಂದೂಡಲಾಯಿತು.