ಖೋಟಾ ನೋಟು ಚಲಾವಣೆ ಆರೋಪಿಗಳು 
ಬೆಂಗಳೂರು

ಖೋಟಾ ನೋಟು ಚಲಾವಣೆ ಜಾಲ ಪತ್ತೆ 7 ಬಂಧನ

21.68 ಲಕ್ಷ ಖೋಟಾ ನೋಟುಗಳು ವಶಕ್ಕೆ, 500 ಮುಖಬೆಲೆಯ 4,337 ನೋಟುಗಳು ಜಪ್ತಿ

ಬೆಂಗಳೂರು: ನಗರದಲ್ಲಿ ಖೋಟಾ ನೋಟುಗಳ ಚಲಾವಣೆ ಮಾಡುತ್ತಿದ್ದ ಹೊರ ರಾಜ್ಯದ ಜಾಲ ಪತ್ತೆ ಮಾಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮುರುಗನ್ (52), ಗೋವಿಂದನ್ (43), ಬರ್ಕತ್ (38), ಶರವಣನ್ (47) ಮತ್ತು ತೆಲಂಗಾಣ ಮೂಲದ ಸತೀಶ್ ಅಲಿಯಾಸ್ ಸತ್ಯಂ (47), ಲಕ್ಷ್ಮಣ್ (46) ಮತ್ತು ಕೃಷ್ಣ (43) ಬಂಧಿತರು. ಆರೋಪಿಗಳಿಂದ 21.68 ಲಕ್ಷ ರೂ. ಮೌಲ್ಯದ 500 ಮುಖ ಬೆಲೆಯ 4,337 ನಕಲಿ ನೋಟುಗಳು, 1 ಕಾರು, 8 ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳ ಜಪ್ತಿ ಮಾಡಿದ್ದಾರೆ. ಖೋಟಾ ನೋಟು ಚಲಾವಣೆಯಲ್ಲಿ ತೋಡಗಿದ್ದ ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.14ರಂದು ಮೈಸೂರು ರಸ್ತೆಯ ಮೇಲು ಸೇತುವೆ ಬಳಿ ಇಬ್ಬರು ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದರು. ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 9 ಮಂದಿ ಸೇರಿಕೊಂಡು ನಕಲಿ ನೋಟು ದಂಧೆಯಲ್ಲಿ ತೋಡಗಿರುವುದು ಪತ್ತೆಯಾಗಿದೆ. ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಸಿದಾಗ ತಮಿಳುನಾಡು ಮತ್ತು ತೆಲಂಗಾಣದಲ್ಲಿದ್ದ ಇತರೆ ಆರೋಪಿಗಳ ಬಂಧಿಸಿದ್ದಾರೆ.

ಹೊರ ರಾಜ್ಯದಲ್ಲಿ ದಾಳಿ:

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಆರೋಪಿಯೋರ್ವನ ಮನೆ ಮೇಲೆ ದಾಳಿ ನಡೆಸಿದಾಗ 500 ರೂ. ಮುಖಬೆಲೆಯ 1,337 ಖೋಟಾ ನೋಟುಗಳು, ಮುದ್ರಣ ಯಂತ್ರ, ಕಂಪ್ಯೂಟರ್, ಲ್ಯಾಪ್‌ಟಾಪ್, ಲ್ಯಾಮಿನೇಟರ್, ಕಲರ್ ಪ್ರಿಂಟರ್, ಕಟ್ಟಿಂಗ್ ಮಿಷನ್, ಹಾಲೋಗ್ರಾಂ, ಜೆರಾಕ್ಸೃ್ ಮಷಿನ್ ಹಾಗೂ ಇತರೆ ಉಪಕರಣ ಜಪ್ತಿ ಮಾಡಿದ್ದಾರೆ.

ಬೆಂಗಳೂರು ಸೇರಿ ಹೊರ ರಾಜ್ಯದಲ್ಲೂ ಆರೋಪಿಗಳು ಈ ಕೃತ್ಯ ನಡೆಸುತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಕಲಿ ನೋಟು ಚಲಾವಣೆ ದಂಧೆಯಲ್ಲಿ ತೋಡಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಚಾಮರಾಜಪೇಟೆ ಇನ್ಸ್‌ಪೆಕ್ಟರ್ ಕಿರಣ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.