- ಪೂರ್ವ ಪಾಲಿಕೆಯ ಅಪರ ಆಯುಕ್ತರ ಹೇಳಿಕೆ
ಬೆಂಗಳೂರು: ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ರಸ್ತೆ ಅಗೆತಕ್ಕೆ ಕಾರ್ಪೋರೇಷನ್ ವತಿಯಿಂದ ಕಡ್ಡಾಯ ಅನುಮತಿ ಪಡೆಯಬೇಕು. ಈ ನಿಯಮ ಪಾಲಿಸದ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದ್ದಾರೆ.
ಗುರುವಾರ ಪಾಲಿಕೆ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದ ಅವರು ಈ ನಿರ್ದೇಶನವನ್ನು ನೀಡಿದರು.
ಬೆಸ್ಕಾಂ, ಬಿಎಂಆರ್‌ಸಿಎಲ್, ಜಲಮಂಡಳಿ, ಕೆಪಿಟಿಸಿಎಲ್ ಒಎಫ್‌ಸಿ ಕೇಬಲ್ ಸಂಸ್ಥೆಗಳು ಸೇರಿ ವಿವಿಧ ಇಲಾಖೆಗಳು ಕೈಗೊಂಡಿರುವ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ರಸ್ತೆ ಅಗೆತದ ಬಳಿಕ ಸಮರ್ಪಕವಾಗಿ ಮುಚ್ಚುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನಿರಂತರವಾಗಿ ದೂರುಗಳು ಬರುತ್ತಿವೆ. ಹಾಗಾಗಿ ಎಲ್ಲ ಸಂಸ್ಥೆಗಳ ನಿಯಮ ಪಾಲಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಖಡಕ್ ಸಂದೇಶವನ್ನು ರವಾನಿಸಿದರು.
ಸಮನ್ವಯ ಸಾಧಿಸಲು ಸೂಚನೆ:
ವಿವಿಧ ಸಂಸ್ಥೆಗಳು ಪರಸ್ಪರ ಸಮನ್ವಯ ಸಾಧಿಸಿ ರಸ್ತೆ ಅಗೆತವನ್ನು ನಿಯಂತ್ರಿಸಬೇಕು. ಕತ್ತರಿಸಲಾದ ರಸ್ತೆಗಳನ್ನು ಸಕಾಲದಲ್ಲಿ ಮತ್ತು ಗುಣಮಟ್ಟದೊಂದಿಗೆ ಪುನಃಸ್ಥಾಪಿಸಬೇಕು. ಕಾರ್ಯಕ್ಷಮತೆ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹೊಣೆಗಾರಿಕೆ ಹೊಂದಿರುವ ರಸ್ತೆ ಪುನರ್ಸ್ಥಾಪನಾ ಸಮಿತಿಯನ್ನು ರಚಿಸಬೇಕು. ವಾಹನ ಸವಾರರು ಎದುರಿಸುತ್ತಿರುವ ಮೂಲಸೌಕರ್ಯ ತೊಂದರೆಗಳನ್ನು ತಪ್ಪಿಸುವಂತೆ ಅವರು ಸೂಚಿಸಿದರು.