Consumer commission 
ಬೆಂಗಳೂರು

₹76000 ಮರುಪಾವತಿಲು ಮೇಕ್​ಮೈಟ್ರಿಪ್​​ಗೆ ಗ್ರಾಹಕರ ಆಯೋಗದ ಆದೇಶ| Consumer commission

ಶ್ರವಣ್ ನೀರಬಿದಿರೆ

ಬೆಂಗಳೂರು: 

ಕುಟುಂಬದಲ್ಲಿ ಸಂಭವಿಸಿದ್ದ ಅಪಘಾತದ ತುರ್ತುಪರಿಸ್ಥಿತಿಯಿಂದಾಗಿ ಪ್ರವಾಸ ರದ್ದುಗೊಳಿಸಿದ್ದ ಗ್ರಾಹಕನಿಗೆ ಮುಂಗಡ ಹಣ ಮರುಪಾವತಿಸಲು ನಿರಾಕರಿಸಿದ್ದ, ಆನ್​ಲೈನ್​ ಪ್ರವಾಸ ಯೋಜನಾ ಸಂಸ್ಥೆ ಮೇಕ್​ ಮೈ ಟ್ರಿಪ್​ನ ಕ್ರಮವನ್ನು ರಾಜ್ಯ ಗ್ರಾಹಕರ ಆಯೋಗ ಖಂಡಿಸಿದೆ. ಗ್ರಾಹಕನಿಂದ ಪಡೆದ 76 ಸಾವಿರ ರೂಪಾಯಿ ಹಣವನ್ನು ಶೇ.9ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಲು ಆದೇಶಿಸಿದೆ.

ಪರಿಹಾರ ನೀಡಲು ಆದೇಶಿಸಿದ್ದ ಬೆಂಗಳೂರು ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಪ್ರಶ್ನಿಸಿ ಮೇಕ್​ ಮೈ ಟ್ರಿಪ್​ ಇಂಡಿಯಾ ಪೆ.ಲಿ. ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್​ ಮತ್ತು ಮಹಿಳಾ ಸದಸ್ಯೆ ಸುನಿತಾ ಸಿ. ಬಾಗೇವಾಡಿ ಅವರಿದ್ದ ಪೀಠವು ಈ ಆದೇಶ ನೀಡಿದೆ. 
ಗ್ರಾಹಕನಿಂದ ಮುಂಗಡ ಹಣ ಪಡೆದ ನಂತರ ಕಂಪನಿಯು ಯಾವುದೇ ವಿಮಾನ ಟಿಕೆಟ್​ ಅಥವಾ ಹೋಟೆಲ್​ ಬುಕಿಂಗ್​ ಕಾಯ್ದಿರಿಸಿರಲಿಲ್ಲ. ನೈಜ ಮತ್ತು ವೈದ್ಯಕಿಯ ಕಾರಣಗಳಿಗಾಗಿ ಬುಕಿಂಗ್​ ರದ್ದುಗೊಳಿಸಿದ ಮೇಲೂ ಮುಂಗಡ ಹಣವನ್ನು ಹಿಂತಿರುಗಿಸದಿರುವ ಕ್ರಮ ತಪ್ಪು ಎಂದು ಪೀಠ ಹೇಳಿದೆ.

ಪ್ರಕರಣದ  ಹಿನ್ನಲೆ:

ಬೆಂಗಳೂರಿನ ಆನೆಪಾಳ್ಯ ನಿವಾಸಿ ಹರೀಶ್​ ಎಂಬುವರು ತಮ್ಮ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕಾಗಿ 2017ರ ಜುಲೈನಲ್ಲಿ 2.90 ಲಕ್ಷ ರೂ. ಮೌಲ್ಯದ ಪ್ರವಾಸ ಪ್ಯಾಕೇಜ್​ ಆಯ್ದುಕೊಂಡು 76 ಸಾವಿರ ರೂ. ಮುಂಗಡ ಪಾವತಿಸಿದ್ದರು. ಆದರೆ, ಹರೀಶ್​ ಅವರ ಮಗ ಅಪಘಾತಕ್ಕೊಳಗಾದ ಕಾರಣ ಪ್ರವಾಸ ರದ್ದುಗೊಳಿಸಿ, ಹಣ ಹಿಂತಿರುಗಿಸಲು ಕೋರಿದ್ದರು. ಆದರೆ, ಕಂಪನಿಯು ಅದನ್ನು ನಿರಾಕರಿಸಿತ್ತು. ಕಂಪನಿಯ ಕ್ರಮವನ್ನು ಪ್ರಶ್ನಿಸಿ ಹರೀಶ್​ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗವು 76 ಸಾವಿರ ರೂ. ಗಳನ್ನು ಶೇ.9ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಗ್ರಾಹಕನಿಗೆ ಮಾನಸಿಕ ಕಿರುಕುಳ ಉಂಟುಮಾಡಿದ್ದಕ್ಕಾಗಿ ಮತ್ತು ದಾವೆ ವೆಚ್ಚ ಪಾವತಿಸಲು ಹೆಚ್ಚುವರಿ 10 ಸಾವಿರ ರೂ. ನೀಡುವಂತೆ 2019ರ ಏ.3ರಂದು ಆದೇಶಿಸಿತ್ತು. ಇದನ್ನು ರಾಜ್ಯ ಆಯೋಗದಲ್ಲಿ ಕಂಪನಿ ಪ್ರಶ್ನಿಸಿತ್ತು.