- ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿಕೆ
ಬೆಂಗಳೂರು: ಶಾಂತಿನಗರದಲ್ಲಿರುವ ಆಸ್ಪತ್ರೆ ಜಾಗದಲ್ಲಿ 300 ಹಾಸಿಗೆ ಸಾಮರ್ಥ್ಯದ ನೂತನ ಹಾಸ್ಪಿಟಲ್ ನಿರ್ಮಿಸಲಾಗುವುದು ಎಂದು ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದರು.
ಕೇಂದ್ರ ನಗರ ಪಾಲಿಕೆಯ ಶಾಂತಿನಗರ ಮತಕ್ಷೇತ್ರದಲ್ಲಿ ಸೋಮವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಶಾಂತಿನಗರ ಆಸ್ಪತ್ರೆ ಸಣ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ವಿಶಾಲವಾದ ಜಾಗವಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಬಸಜನರಿಗಾಗಿ ದೊಡ್ಡಾಸ್ಪತ್ರೆಯನ್ನು ನಿರ್ಮಿಸಲು ಚಿಂತನೆ ನಡೆದಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಕ್ರಮ:
ನಗರದ ಪ್ರಮುಖ ಮಾರ್ಗವಾದ ಎಂ.ಜಿ. ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮೇಲ್ದರ್ಜೆಗೇರಿಸುವ ಸಲುವಾಗಿ ಸ್ಟೋನ್ ಮೆಟ್ರಿಕ್ಸ್ ಆಸ್ಫಾಲ್ಟ್ ಅಥವಾ ಮೈಕ್ರೋ ಸರ್ಫೇಸಿಂಗ್ ಮಾಡಬೇಕು. ಫಾಮ್ ಗ್ರೂವ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಹಾತ್ಮಗಾಂಧಿ ಉದ್ಯಾನದ ಪುನರ್ ಅಭಿವೃದ್ಧಿ ಕಾಮಗಾರಿಯ ವಿನ್ಯಾಸವನ್ನು ಪರಿಶೀಲಿಸಿ, ಕೂಡಲೇ ಕಾಮಗಾರಿಯನ್ನು ಆರಂಭಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಬಿಡಿಎ ಅಧ್ಯಕ್ಷರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶಾಂತಿನಗರ ವಿಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ, ಮೂಲಸೌಕರ್ಯ ಯೋಜನೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಎಲ್ಲ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಯಾವುದೇ ಕಾಮಗಾರಿ ಕೈಗೆತ್ತಿಕೊಂಡಾಗ ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡಬೇಕು. ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹ್ಯಾರಿಸ್ ವಿವರಿಸಿದರು.
ಪರಿಶೀಲನೆ ವೇಳೆ ಕೇಂದ್ರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್, ಅಪರ ಆಯುಕ್ತ ದಲ್ಜಿತ್ ಕುಮಾರ್, ಘನತ್ಯಾಜ್ಯ ನಿರ್ವಹಣೆ ನಿಗಮದ ಸಿಇಒ ಕರೀಗೌಡ, ಸಿಓಓ ರಮಾಮಣಿ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.
ಶಾಂತಿನಗರ ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಂತೆ ಹಾಗೂ ಅವುಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು.
- ಎಂ.ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ