ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು: ಒಂದೇ ಬಾರಿಗೆ ಪಾವತಿ (ಒಟಿಎಸ್) ನೋಟಿಸ್ ನೀಡಿರುವ ಹಾಗೂ ಎರಡು ಕಡೆಯಿಂದ ರಾಜಧನ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಡಿ. ಸಿದ್ದರಾಜು ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರಗಳು ಮಾಲೀಕರ ಪಾಲಿಗೆ ಮರಣಶಾಸನವಾಗಿವೆ. ಒಟಿಎಸ್ ನೋಟಿಸ್ ನೀಡಿರುವುದರಿಂದ ಶಿವಮೊಗ್ಗದಲ್ಲಿ ಕಲ್ಲು ಗಣಿ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಸರ್ಕಾರದ ನೀತಿಗಳೇ ಕಾರಣ ಎಂದು ಕಿಡಿಕಾರಿದರು.
ಕಲ್ಲು ಗಣಿ ಮತ್ತು ಕ್ರಷರ್ ಉದ್ಯಮದ ಮೇಲೆ ಸರ್ಕಾರ ಇಲ್ಲಸಲ್ಲದ ಕಾನೂನುಗಳನ್ನು ವಿಧಿಸುತ್ತಿದೆ. ಇಲಾಖೆಯಿಂದ ಪ್ರತಿವರ್ಷ ಆಡಿಟ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಜತೆಗೆ ಬೇಡಿಕೆ ಪತ್ರವನ್ನು ಸಹ ನಮಗೆ ನೀಡುತ್ತಾರೆ. ಹಾಗಾದರೆ ಇಲ್ಲಿಯವರೆಗೆ ಇಲಾಖೆಯವರು ಮಾಡಿರುವ ಆಡಿಟ್ ವರದಿಯು ಸುಳ್ಳೇ ಎಂದು ಪ್ರಶ್ನಿಸಿದರು.
ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಮಾಡುವುದಕ್ಕೆ ದಂಡ ಹಾಕಲು ಅವಕಾಶವಿಲ್ಲ. ಆದರೆ ಕೆಎಸ್ಆರ್ಎಸ್ಎಸಿ ಏಜೆನ್ಸಿ ವರದಿ ಆಧಾರದ ಮೇರೆಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ಪಟ್ಟಾ ಭೂಮಿಯ ರಾಜಧಾನದ ವಿಚಾರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಸರ್ಕಾರ ದಂಡ ವಿಧಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗಣಿ ಉದ್ಯಮವು ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಯ ಭಾಗ. ನಾವ್ಯಾರೂ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿಲ್ಲ. ಎಂಡಿಪಿ, ಜಿಎಸ್ಟಿ ಮುಖಾಂತರ ಸರಕು ಪಡೆದು ಕ್ರಷಿಂಗ್ ಮಾಡಿ, ಸರಕುಸಾಗಣೆ ಮಾಡಲಾಗುತ್ತಿದೆ. ಸರ್ಕಾರಿ ಕಾಮಗಾರಿ ಗುತ್ತಿಗೆದಾರರಿಗೆ ಎಂಡಿಪಿಯಿಲ್ಲದೆ ಬಿಲ್ ಮಾಡುತ್ತಿರುವ ಪದ್ಧತಿ ಅವೈಜ್ಞಾನಿಕ. ಸರ್ಕಾರವು ದ್ವಿಮುಖ ನೀತಿಯನ್ನು ಕೈಬಿಡಬೇಕು, ವಾಹನಗಳಿಗೆ ಜಿಪಿಎಸ್ ಅಳವಡಿಸಲು ಸೂಚಿಸುತ್ತಿರುವುದು ಹಾಸ್ಯಸ್ಪದ. ಒಕ್ಕೂಟದ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಗೌರವಾಧ್ಯಕ್ಷ ಸಂಜೀವ್ ಎ.ಹಟ್ಟಿಕೋಳಿ, ಪ್ರಧಾನ ಕಾರ್ಯದರ್ಶಿ ಡಿ.ಆರ್. ಮಹೇಶ್, ಕೋಶಾಧಿಕಾರಿ ಉಮಾಶಂಕರಯ್ಯ, ಉಪಾಧ್ಯಕ್ಷರಾದ ಮನೋಜ್ ಶೆಟ್ಟಿ, ಎಚ್.ವಾಗೀಶ್, ವಿರೂಪಾಕ್ಷಗೌಡ ಎಸ್. ಪಾಟೀಲ್, ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ, ರಾಜ್ಯ ಗುತ್ತಿಗೆದಾರರ ಸಂದ ಅಧ್ಯಕ್ಷ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಸದನದಲ್ಲಿ ಧ್ವನಿ ಎತ್ತುವ ಭರವಸೆ
ಪ್ರತಿಭಟನಾ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಭೇಟಿ ನೀಡಿದ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿ, ಕಲ್ಲು ಗಣಿ, ಕ್ರಷರ್ ಮಾಲೀಕರು ಹೋರಾಟ ನಡೆಸುತ್ತಿರುವ ಕುರಿತು ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಜತೆಗೆ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ಕಲ್ಲುಗಣಿ, ಕ್ರಷರ್ ಮಾಲೀಕರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಸರ್ಕಾರವು ಅಧಿಕಾರಿಗಳ ಮಾತು ಕೇಳಿಕೊಂಡು ಕಠಿಣ ನಿಯಮಗಳನ್ನು ವಿಧಿಸಿದೆ. ಲೈಸೆನ್ಸ್ ನೀಡುವುದು, ನವೀಕರಣ ಮಾಡುವತನಕ ಅಧಿಕಾರಿಗಳು ಲಂಚವಿಲ್ಲದೆ ಕೆಲಸ ಮಾಡುವುದಿಲ್ಲ, ಅವರಿಗೆ ಇಲ್ಲದ ಕಾನೂನು ನಮ್ಮ ಮೇಲೆ ಯಾಕೆ ಪ್ರಯೋಗ ಮಾಡುತ್ತಿದ್ದಾರೆ.
- ಸಿ.ಎಸ್. ಭಾಸ್ಕರ್, ರಾಜ್ಯ ಸಂಟನಾ ಕಾರ್ಯದರ್ಶಿ