- ನಕಲಿ ದಾಖಲೆ ಸೃಷ್ಟಿಸಿ 8.91 ಕೋಟಿ ರೂ. ಲೂಟಿ ಆರೋಪ
- ಲೋಕಾಯುಕ್ತ, ಜಿಬಿಎ ಮುಖ್ಯ ಆಯುಕ್ತರಿಗೆ ಎನ್.ಆರ್. ರಮೇಶ್ ದೂರು
ಬೆಂಗಳೂರು: ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗಲೇ, ಕೇಂದ್ರ ಕಾರ್ಪೋರೇಷನ್ ವ್ಯಾಪ್ತಿಯ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ (ಇಇ) ಕಚೇರಿ ಒಂದಕ್ಕೆ 113 ಬಾರಿ ಲೆಕ್ಕಕ್ಕೆ ಸಿಗದಷ್ಟು ಕಂಪ್ಯೂಟರ್, ಪ್ರಿಂಟರ್ ಸೇರಿ ಇನ್ನಿತರ ಉಪಕರಗಳನ್ನು ಪೂರೈಸಲಾಗಿದೆ. ಇದಕ್ಕಾಗಿ 9 ಕೋಟಿ ರೂ. ಮೊತ್ತದ ನಕಲಿ ಬಿಲ್ ಸೃಷ್ಟಿಸಿ ಹಣ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 5 ವರ್ಷದಿಂದ ಶಾಂತಿನಗರ ವಿಭಾಗದ ಇಇ ಕಚೇರಿಗೆ ಮೆ. ಎನ್.ಎಸ್. ಎಂಟರ್‌ಪ್ರೈಸಸ್ ಕಂಪನಿ ಒಟ್ಟು 8,91,46,526 ಮೊತ್ತದ ಗಣಕಯಂತ್ರ, ಪ್ರಿಂಟರ್ ಹಾಗೂ ಇತರ ಪರಿಕರಗಳನ್ನು ಪೂರೈಸಿದ್ದಾಗಿ ನಕಲಿ ದಾಖಲೆ ಸೃಷ್ಟಿಸಿ ಬಿಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. 2021-22ರ ಅವಧಿಯಲ್ಲಿ 35.41 ಲಕ್ಷ ರೂ., 2022-23ರಲ್ಲಿ 69.63 ಲಕ್ಷ ರೂ. 2023-24ರಲ್ಲಿ 3.16 ಕೋಟಿ ರೂ., 2024-25ರಲ್ಲಿ 2.61 ಕೋಟಿ ರೂ. 2025-26ರಲ್ಲಿ 1.61 ಕೋಟಿ ರೂ. ಹಾಗೂ 2026-27ನೇ ಸಾಲಿನಲ್ಲಿ ಜೂ.30ರ ಅವಧಿಯಲ್ಲಿ 47.44 ಲಕ್ಷ ರೂ. ಸೇರಿ ಒಟ್ಟು 8.91 ಕೋಟಿ ರೂ. ಮೊತ್ತದ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆಗೆ ವಂಚಿಸಲಾಗಿದೆ. ಇದರಲ್ಲಿ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿದ್ದು, ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಆಗ್ರಹಿಸಿದ್ದಾರೆ.
ಪೂರೈಕೆ ಮಾಡಿರುವ ಉಪಕರಣಗಳೆಲ್ಲಿ ?:
ಈ ಸಂಬಂಧ ಲೋಕಾಯುಕ್ತ ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ದಾಖಲಾತಿಗಳೊಂದಿಗೆ ಪ್ರತ್ಯೇಕ ದೂರು ನೀಡಲಾಗಿದೆ. ಐದು ವರ್ಷದಲ್ಲಿ ಶಾಂತಿನಗರ ವಿಭಾಗದ ಇಇ ಕಚೇರಿಗೆ ಇಷ್ಟೊಂದು ಪ್ರಮಾಣದಲ್ಲಿ ಗಣಕಯಂತ್ರ, ಪ್ರಿಂಟರ್ ಸೇರಿ ಇತರ ಉಪಕರಣಗಳನ್ನು ಪೂರೈಕೆ ಮಾಡಿರುವುದು ಏಕೆ ? ಆ ರೀತಿ ಪೂರೈಕೆ ಮಾಡಿರುವ ಉಪಕರಣಗಳು ಎಲ್ಲಿ ಹೋದವು ಅಥವಾ ಏನಾದವು ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಿಲ್ಲ. ಹಾಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬಿಲ್ ಬಿಡುಗಡೆ ವೇಳೆ ದೊಡ್ಡ ಮೊತ್ತಕ್ಕೆ ಅನುಮಾನ ವ್ಯಕ್ತಪಡಿಸಿರುವ ಕೇಂದ್ರ ಪಾಲಿಕೆಯ ಉಪ ಹಣಕಾಸು ನಿಯಂತ್ರಿಕರು (ಡಿಸಿಎಫ್) ಕಡತವನ್ನು ವಾಪಸ್ ಕಳುಹಿಸಿದ್ದಾರೆ. ಕೊನೆ ಕ್ಷಣದಲ್ಲಿ ವಂಚನೆಯನ್ನು ತಡೆದಿರುವ ಹಿನ್ನೆಲೆಯಲ್ಲಿ ಕಡತ ನಿರ್ವಹಿಸಿ ಆ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸುವಂತೆ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.