- ಉತ್ತರ ಪಾಲಿಕೆ ಆಯುಕ್ತ ಸುನೀಲ್‌ಕುಮಾರ್ ನಿರ್ದೇಶನ
- ರಸ್ತೆ ನಿರ್ವಹಣೆ, ಮಳೆಗಾಲ ಸಿದ್ಧತೆ ಬಗ್ಗೆ ಪರಿಶೀಲನಾ ಸಭೆ
ಬೆಂಗಳೂರು: ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ ಅಡಿಯಲ್ಲಿ ಬರುವ ರಸ್ತೆ ಅಭಿವೃಧಿ ಹಾಗೂ ಇತರ ಪ್ರಮುಖ ಕಾಮಗಾರಿಗಳನ್ನು ಈ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವಂತೆ ಉತ್ತರ ನಗರ ಪಾಲಿಕೆಯ ಆಯುಕ್ತ ಪಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾಲಿಕೆಯ ವಿವಿಧ ಕಾಮಗಾರಿಗಳು ಹಾಗೂ ಮಳೆಗಾಲ ಪೂರ್ವ ಸಿದ್ಧತೆ ಕುರಿತು ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 694 ಕೋಟಿ ರೂ. ವೆಚ್ಚದ ಅನುದಾನದ ಕಾಮಗಾರಿಗಳ ಪ್ರಗತಿ, ರಸ್ತೆಗುಂಡಿ ಮುಚ್ಚುವಿಕೆ, ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ, ಟೋಯಿಂಗ್ ವಾಹನಗಳ ಕಾರ್ಯಾಚರಣೆ, ಟ್ರಾನ್ಸ್‌ಫರ್ ಸ್ಟೇಷನ್‌ಗಳ ನಿರ್ವಹಣೆ, ರಸ್ತೆ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆ, ಸ್ಕೈವಾಕ್ ಟೆಂಡರ್ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಮಳೆಗಾಲಕ್ಕೂ ಮುನ್ನ ಪೂರ್ಣಕ್ಕೆ ಗಡುವು: ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಬೇಕು. ಮಳೆಗಾಲ ಆರಂಭವಾದ ಬಳಿಕ ಕಾಮಗಾರಿ ಕೈಗೊಳ್ಳುವುದು ಕಷ್ಟ ಆಗುವುದರಿಂದ ಈ ತಿಂಗಳ ಅಂತ್ಯದೊಳಗೆ ಆದ್ಯತೆ ಮೇರೆಗೆ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಬೇಕು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚುವುದು, ನೀರು ನಿಲ್ಲುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚರಂಡಿ ಮತ್ತು ರಸ್ತೆ ನಿರ್ವಹಣಾ ಕಾಮಗಾರಿಗಳನ್ನು ವೇಗಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಆರ್. ಲತಾ, ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್ ಹಾಗೂ ಯಮುನಾ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.
ಟೆಂಡರ್ ಪ್ರಕ್ರಿಯೆ ತ್ವರಿತಗೊಳಿಸಿ:
ನಗರ ಪಾಲಿಕೆಯ ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆಯ ಟೆಂಡರ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿಗೊಳಿಸಿ ಪ್ರಮುಖ ರಸ್ತೆಗಳಲ್ಲಿ ಕಸ ಗುಡಿಸುವ ಯಂತ್ರಗಳ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಸ್ಕೈವಾಕ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತ್ವರಿತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.