ಬೆಂಗಳೂರು: ಮಹಿಳಾ ಸಶಕ್ತೀಕರಣ, ನಾಯಕತ್ವ ವೃದ್ಧಿಯಂತಹ ಹತ್ತು ಹಲವು ಆಶಯಗಳೊಂದಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಕಾಮನ್ವೆಲ್ತ್ ಮಹಿಳಾ ಸಂಸದೀಯರ 2 ದಿನಗಳ ಪ್ರಾದೇಶಿಕ ಸಮ್ಮೇಳನ ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾಯಿತು.
ದೇಶದ ನಾನಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿದ್ದ ಮಹಿಳಾ ಸಂಸದರು, ಶಾಸಕರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಲೋಕಸಭೆ ಅಧ್ಯಕ್ಷ ಓಂಬಿರ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿ ಸೀ ಸಬಲೀಕರಣದ ಪ್ರಾಮುಖ್ಯತೆ ಪ್ರತಿಪಾದಿಸಿದರು.
ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಗಳಿಲ್ಲದ ಹಕ್ಕಿಯಂತೆ, ನೀತಿ ನಿರೂಪಣೆಯ ಪ್ರತಿ ಹಂತದಲ್ಲಿ ಮುಂದಿರಬೇಕು. ರಾಜಕೀಯವಾಗಿ ದೃಢ ಹೆಜ್ಜೆಗಳನ್ನಿಡಬೇಕು. ಆನ್ಲೈನ್ ಕಿರುಕುಳ, ಡ್ಿೇಕ್ ಸವಾಲುಗಳನ್ನು ಎದುರಿಸಬೇಕೆಂಬ ಅಭಿಪ್ರಾಯಗಳು ಸಮ್ಮೇಳನದುದ್ದಕ್ಕೂ ಸದ್ದುಮಾಡಿದವು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ,ನೀತಿ ನಿರೂಪಣೆ ಹಂತದಲ್ಲಿ ಮಹುಇಳೆಯರ ಮಾತಿಗೆ ಮನ್ನಣೆ ಸಿಗಬೇಕು. ಅವರ ಧ್ವನಿ ಮತ್ತು ದೃಷ್ಟಿಕೋನಕ್ಕೆ ಸೂಕ್ತ ಸ್ಥಾನ ದೊರೆತಾಗ ಮಾತ್ರ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ದೇಶದ ಪ್ರಜಾಸತ್ತಾತ್ಮಕ ಪರಂಪರೆಗೆ ಶತಮಾನಗಳ ಇತಿಹಾಸವಿದೆ. 12 ನೇ ಶತಮಾನದಲ್ಲಿ ಬಸವಣ್ಣನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪವು ಸಮಾನತೆಗೆ, ವಿಚಾರವಿನಿಮಯಕ್ಕೆ, ಮುಕ್ತ ಚರ್ಚೆಗೆ, ಜನಸಹಭಾಗಿತ್ವದ ಸಂಸ್ಕೃತಿಗೆ ಇಂಬು ನೀಡಿತ್ತು ಎಂದರು.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಮಾತನಾಡಿ, ಸಮ್ಮೇಳನಗಳು ಚರ್ಚೆ, ನಿರ್ಣಯಗಳಿಗೆ ಸೀಮಿತ ಆಗದೆ ಮಾರ್ಗದರ್ಶನ ನೀಡುವ, ಡಿಜಿಟಲ್ ಸಾಕ್ಷರತೆ ಹೆಚ್ಚಿಸುವ, ಮಹಿಳಾ ಆರೋಗ್ಯಕ್ಕೆ ಸ್ಪಂದಿಸುವ ನೀತಿಗಳನ್ನು ರೂಪಿಸುವತ್ತ ಗಮನ ನೀಡಬೇಕು ಎಂದರು.
ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಾ ಡಿ. ಪುರಂದೇಶ್ವರಿ ಮಾತನಾಡಿ, ಇಂದಿನ ತಂತಜ್ಞಾನ ಮತ್ತು ಎಐ ಯುಗದಲ್ಲಿ ಮಹಿಳಾ ಪ್ರತಿನಿಧಿಗಳು ಸೈಬರ್ ಕಿರುಕುಳ, ಸುಳ್ಳುಸುದ್ದಿ, ಉದ್ದೇಶಪೂರ್ವಕ ವರ್ಚಸ್ಸು ಹಾಳುಮಾಡುವ ಪ್ರಯತ್ನಗಳನ್ನು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ, ಕಾನೂನುಬದ್ಧ ಹಾಗೂ ಕಾಲಮಿತಿಯ ಕಾರ್ಯಯೋಜನೆ ರೂಪಿಸಲು ಆಗ್ರಹಿಸಿದರು.