- ಪ್ರಮುಖ ಸ್ಥಳಗಳಲ್ಲಿ ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಲು ಸೂಚನೆ
- ಕುಂಬಾರಪೇಟೆ ಅಗ್ನಿ ಅನಾಹುತ ಸ್ಥಳಕ್ಕೆ ಮುಖ್ಯ ಆಯುಕ್ತರ ಭೇಟಿ
ಬೆಂಗಳೂರು: ಚಿಕ್ಕಪೇಟೆಯ ವಾಣಿಜ್ಯ ಪ್ರದೇಶಗಳಲ್ಲಿ ಅವಘಡಗಳು ಸಂಭವಿಸದಂತೆ ಹಾಗೂ ಅವುಗಳನ್ನು ನಿಯಂತ್ರಿಸುವ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಪಾಲಿಕೆ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿಕ್ಕಪೇಟೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಕಳೆದ ವರ್ಷವೂ ಅಗ್ನಿ ಅನಾಹುತ ಸಂಭವಿಸಿತ್ತು. ಈಗ ಮತ್ತೆ ಕುಂಬಾರಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಹಿನ್ನೆಲೆ, ಅನಾಹುತಕ್ಕೆ ಕಾರಣಗಳೇನು? ಇಂತಹ ಘಟನೆಗಳನ್ನು ಯಾವ ರೀತಿಯಲ್ಲಿ ನಿಯಂತ್ರಿಸಬಹುದು ಎಂಬುದರ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಬಿಎ, ಕೇಂದ್ರ ನಗರ ಪಾಲಿಕೆ, ಅಗ್ನಿಶಾಮಕ ದಳ ಹಾಗೂ ವಿದ್ಯುತ್ ಇಲಾಖೆ ಒಳಗೊಂಡ ಸಮಿತಿ ರಚಿಸಲು ಸೂಚನೆ ನೀಡಿದರು.
ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಿ:
ಅಗ್ನಿ ಅವಘಡಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಬೇಕು. ಜತೆಗೆ ಹೈಡ್ರೆಂಟ್ ವ್ಯವಸ್ಥೆಯ ಮೇಲ್ವಿಚಾರಣೆಗೆ ಸಿಸಿ ಕ್ಯಾಮರಾ ಅಳವಡಿಸುಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು.
ಭೇಟಿ ವೇಳೆ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.
ಕುಂಬಾರಪೇಟೆಯ 3 ಅಂತಸ್ತಿನ ಲಕ್ಷ್ಮಿ ಕಮರ್ಶಿಯಲ್ ಕಾಂಪ್ಲೆಕ್ಸ್ ಇರುವ ಸ್ಥಳ ಕಿರಿದಾದ ರಸ್ತೆ ಇರುವ ಕಾರಣ ಅಗ್ನಿಶಾಮಕ ವಾಹನಗಳಿಗೆ ನೇರವಾಗಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅಂದಾಜು 300 ಮೀ. ದೂರದಿಂದ ಪೈಪ್‌ಗಳನ್ನು ಜೋಡಸಿಕೊಂಡು ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಜಿಬಿಎ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.
ಮುಖ್ಯ ಆಯುಕ್ತರ ನಿರ್ದೇಶನ ಏನು?:
* ಚಿಕ್ಕಪೇಟೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಕಟ್ಟಡಗಳಲ್ಲಿಯೂ ಅಗ್ನಿ ಸುರಕ್ಷೆ / ಅಗ್ನಿ ನಂದಿಸುವ ಉಪಕರಣದ ವ್ಯವಸ್ಥೆ ಕಡ್ಡಾಯ. ಈ ವ್ಯವಸ್ಥೆ ಅಳವಡಿಸದ ಕಟ್ಟಡಗಳನ್ನು ಮುಲಾಜಿಲ್ಲದೆ ಸೀಲ್ ಮಾಡಲು ಸೂಚನೆ.
* ವ್ಯಾಪಾರ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು.
* ಅನಧಿಕೃತ ಕಟ್ಟಡಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನಿರ್ಮಾಣ ಕಾಮಗಾರಿ ನಿಲ್ಲಿಸಲು ನೋಟಿಸ್ ಜಾರಿ.
* ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಭಾಗಗಳನ್ನು ತೆರವುಗೊಳಿಸದಿದ್ದರೆ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.