ಅರಣ್ಯ ಭವನದಲ್ಲಿ ಕಮಾಂಡ್ ಸೆಂಟರ್ ಉದ್ಘಾಟನೆ
ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ತಂತ್ರಜ್ಞಾನ ಆಧಾರಿತ ಪರಿಹಾರ ನೀಡಲು ರಾಜ್ಯ ಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ (Command center ) ಮಹತ್ವದ ಪಾತ್ರ ವಹಿಸಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಶನಿವಾರ ಕಮಾಂಡ್ ಸೆಂಟರ್ ಮತ್ತು 7 ವಿಭಾಗಗಳ ಪ್ರಾದೇಶಿಕ ನಿಯಂತ್ರಣ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕಾಡಂಚಿನ ಜನರು ಮತ್ತು ಸಾರ್ವಜನಿಕರು ವನ್ಯಜೀವಿಗಳ ಸಂಚಾರ ಅಥವಾ ಅರಣ್ಯ ಅಪರಾಧಗಳ ಬಗ್ಗೆ ಇಲಾಖೆ ದೂರವಾಣಿ ಸಂಖ್ಯೆ 1926ಗೆ ಕರೆ ಮಾಡಿ ತಿಳಿಸಬಹುದು ಎಂದರು.
ಅರಣ್ಯ ಮತ್ತು ಕಾಡಂಚಿನಲ್ಲಿ ಅಳವಡಿಸಿರುವ ಎಐ ಕ್ಯಾಮರಾಗಳ ವಿಡಿಯೋ, ಬಾಹ್ಯಾಕಾಶ ಚಿತ್ರಗಳನ್ನು ಕಮಾಂಡ್ ಸೆಂಟರ್‌ನಲ್ಲಿ ಪರಾಮರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಇ-ಗಸ್ತು, ಜಿಪಿಎಸ್-ಆಧಾರಿತ ಗಸ್ತು ತಂಡಗಳ ಮೇಲ್ವಿಚಾರಣೆ ಮತ್ತು ವನ್ಯಜೀವಿಗಳ ಚಲನವಲನದ ಬಗ್ಗೆ ಸಕಾಲಿಕ ಮಾಹಿತಿಯನ್ನು ಸಂಬಂಧಿತ ಇಲಾಖೆಗೆ ತಲುಪಿಸಿ ಕ್ರಮವಹಿಸಲೂ ನೆರವಾಗಲಿದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ 11 ವಿಭಾಗಗಳಲ್ಲಿ ಸ್ಥಾಪಿಸಲಾಗಿದೆ ಎಂದರು.
ರೈಲ್ವೆ ಬ್ಯಾರಿಕೇಡ್, ಸೌರಬೇಲಿ, ಆನೆ ಕಂದಕಗಳ ನಿರ್ವಹಣೆ ಮತ್ತು ಅರಣ್ಯದಲ್ಲಿ ಕೈಗೊಳ್ಳುವ ಕಾಮಗಾರಿಗಳ ಸಕಾಲಿಕ ನಿಗಾಕ್ಕೂ ಕಮಾಂಡ್ ಸೆಂಟರ್ ಪರಿಹಾರ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಎಪಿಸಿಸಿಎಫ್ ಕುಮಾರ್ ಪುಷ್ಕರ್ ಮತ್ತು ಮನೋಜ್ ರಾಜನ್ ಮತ್ತಿತರರು ಭಾಗವಹಿಸಿದ್ದರು.