- 103 ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ
- ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ 28ನೇ ಘಟಿಕೋತ್ಸವ
- ಮುಂದಿನ ಘಟಿಕೋತ್ಸವ ರಾಮನಗರ ಕ್ಯಾಂಪಸ್‌ನಲ್ಲೇ ನಡೆಯಲೆದು ಸಿಎಂ ಆಶಯ
ಬೆಂಗಳೂರು: ವೈದ್ಯಕೀಯ ಕಾಲೇಜುಗಳಿಂದ ಹೊಸದಾಗಿ ವೈದ್ಯರಾಗಿ ಹೊರಬರುತ್ತಿರುವ ಪದವೀಧರರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಮಂಗಳವಾರ ನಡೆದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಗ್ರಾಮೀಣ ಜನತೆ ವಿವಿಧ ಸೌಲಭ್ಯ ಸಿಗುತ್ತಿಲ್ಲವೆಂಬ ಕಾರಣಕ್ಕೆ ನಗರಗಳತ್ತ ವಲಸೆ ಬರುತ್ತಿದ್ದಾರೆ. ವಲಸೆ ತಪ್ಪಿಸಲು ಯುವ ಪದವೀಧರರು ನಗರ ಪ್ರದೇಶಗಳಲ್ಲೇ ಕೇಂದ್ರೀಕರಿಸದೆ ಹಳ್ಳೀಗಾಡಿನಲ್ಲೂ ಆರೋಗ್ಯ ಸೇವೆ ಒದಗಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ವೈದ್ಯರು ಕಣ್ಣಿಗೆ ಕಾಣುವ ದೇವರು. ಜನ ಎಷ್ಟೇ ಕಷ್ಟ ಇದ್ದರೂ ಬಹಳ ನಂಬಿಕೆ ಹಾಗೂ ವಿಶ್ವಾಸದಿಂದ ಡಾಕ್ಟರ್ಸ್ ಬಳಿ ಹೋಗುತ್ತಾರೆ. ಅವರ ನಂಬಿಕೆ ಉಳಿಸಿಕೊಂಡು ಸೇವೆ ಮಾಡಿದರೆ ಅದರಿಂದ ಸಿಗುವ ತೃಪ್ತಿ ಹಾಗೂ ಸಂತೋಷ ಇನ್ನೊಂದಿಲ್ಲ. ಈ ವೃತ್ತಿಯಲ್ಲಿ ನಿಮಗೆ ನಿತ್ಯವೂ ಸವಾಲು ಎದುರಾಗುತ್ತದೆ. ಜತೆಗೆ ನಿಮ್ಮ ಮುಂದೆ ದೊಡ್ಡ ಸ್ಪರ್ಧೆಯೂ ಇದೆ. ಹಲವು ದೇಶಗಳಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಭಾರತೀಯರು ಅದರಲ್ಲೂ ಕರ್ನಾಟಕದ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿರುವ ಗುಣಮಟ್ಟ ಭಾರತ ಮಾತ್ರವಲ್ಲ, ವಿಶ್ವದಲ್ಲೇ ಎಲ್ಲೂ ಇಲ್ಲ. ಇಲ್ಲಿ ತಯಾರಾದ ವೈದ್ಯರ ಪ್ರತಿಭೆ, ಗುಣಮಟ್ಟ, ಸೇವೆ ಹಾಗೂ ಬದ್ಧತೆಗೆ ಸರಿಸಾಟಿ ಯಾರೂ ಇಲ್ಲ ಎಂದರು.
ವಾರ್ಷಿಕ 13,940 ವೈದ್ಯರ ತಯಾರಿ:
ಕರ್ನಾಟಕದಲ್ಲಿ ಪ್ರತಿ ವರ್ಷ 72 ಸಾವಿರ ವೈದ್ಯಕೀಯ ಪದವೀಧರರನ್ನು ತಯಾರಿಸುತ್ತಿದೆ. ಈ ಪೈಕಿ 13,940 ವೈದ್ಯರನ್ನು ಕೊಡುಗೆಯಾಗಿ ನೀಡುತ್ತಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ವೈದ್ಯರನ್ನು ನೀಡುತ್ತಿರುವುದು ನಮ್ಮ ರಾಜ್ಯ ಮಾತ್ರ. ಕರ್ನಾಟಕ ಐಟಿ ಕ್ಷೇತ್ರ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಹೊಂದಿದೆ. ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರಿದ್ದು, ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರಿದ್ದಾರೆ. ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. 72 ವೈದ್ಯಕೀಯ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ಇದು ನಮ್ಮ ಶಕ್ತಿ. ಇಲ್ಲಿ ತಯಾರಾದ ಅತ್ಯುತ್ತಮ ವೈದ್ಯರು, ನರ್ಸ್‌ಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಿಎಂ ವಿವರಿಸಿದರು.
ಘಟಿಕೋತ್ಸವದಲ್ಲಿ ವಿವಿಯ ಕುಲಪತಿ ಡಾ. ಭಗವಾನ್ ಬಿ.ಸಿ., ಕುಲಸಚಿವ ಡಾ. ರಿಯಾಜ್ ಬಾಷಾ, ಕುಲಸಚಿವ ಅರ್ಜುನ್ ಒಡೆಯರ್ ಹಾಗೂ ಇತರ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.
ಗುಣಮಟ್ಟದ ಶಿಕ್ಷಕರೇ ವಿವಿಯ ಹೆಗ್ಗುರುತು:
ಯಾವುದೇ ಒಂದು ವಿವಿಯ ಶಕ್ತಿ ಎಂದರೆ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲ, ಪದವಿಗಳ ಸಂಖ್ಯೆಯೂ ಅಲ್ಲ. ಅಲ್ಲಿರುವ ಗುಣಮಟ್ಟದ ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗದರ್ಶಕರಾಗಬೇಕು, ಸಂಶೋಧನೆಗೆ ಪೂರಕವಾಗಿ ರೋಲ್ ಮಾಡೆಲ್ಗಳಾಗಿರಬೇಕು. ರಾಜೀವ್‌ಗಾಂಧಿ ವಿವಿ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿದ್ದು, ತಮ್ಮ ಸರ್ಕಾರ ವಿವಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲು ಬದ್ಧವಾಗಿದೆ. ಮುಂದಿನ ಘಟಿಕೋತ್ಸವ ರಾಮನಗರದ ಕ್ಯಾಂಪಸ್‌ನಲ್ಲೇ ನಡೆಯಲಿ ಎಂದು ಸಿಎಂ ಆಶಿಸಿದರು.
ಮೂವರಿಗೆ ಗೌರವ ಡಾಕ್ಟೋರೇಟ್ ಗೌರವ:
ಘಟಿಕೋತ್ಸವದಲ್ಲಿ ಆರೋಗ್ಯ ವಿಜ್ಞಾನಗಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ನೈಲಾಡಿ ಶ್ರೀಧರ ಶೆಟ್ಟಿ, ಡಾ. ಹರ್ಷಿಣಿಗಿ ವೀರಭದ್ರಪ್ಪ ಹಾಗೂ ಡಾ. ಎ.ಸಿ. ಷಣ್ಮುಗಂ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿಯನ್ನು ರಾಜ್ಯಪಾಲರು ಪ್ರದಾನಿಸಿದರು.
ವೈದ್ಯ ವೃತ್ತಿಯಲ್ಲಿ ನೈತಿಕತೆ, ಸೇವೆ ಮುಖ್ಯ: ರಾಜ್ಯಪಾಲ ಗೆಹಲೋತ್
ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು, ಡಾಕ್ಟರ್ಸ್ ಸದಾ ನೈತಿಕತೆ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕಿವಿಮಾತು ಹೇಳಿದರು.
ವೈದ್ಯರ ಮಾತುಗಳು ಭರವಸೆ ನೀಡುತ್ತವೆ, ಅವರ ಸ್ಪರ್ಶ ನಂಬಿಕೆಯನ್ನು ಮೂಡಿಸುತ್ತದೆ ಮತ್ತು ಅವರ ನಿರ್ಧಾರ ಜೀವ ಉಳಿಸುವ ಸಾಮರ್ಥ್ಯವನ್ನು ಹೊಂದಿವೆ. ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆಯೇ ಅತಿದೊಡ್ಡ ಆಸ್ತಿ. ರೋಗಿಗಳು ತಮ್ಮ ಜೀವವನ್ನು ವೈದ್ಯರ ಕೈಯಲ್ಲಿ ಇಡುತ್ತಾರೆ. ಆದ್ದರಿಂದ ವೈದ್ಯರು ಪಾರದರ್ಶಕತೆ, ಸೂಕ್ಷ್ಮತೆ ಮತ್ತು ನೈತಿಕ ಮೌಲ್ಯಗಳನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
103 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ:
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ ಒಟ್ಟು 72,741 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 71 ಮಂದಿಗೆ ಪಿ.ಎಚ್‌ಡಿ, ಸೂಪರ್‌ಸ್ಪೆಷಾಲಿಟಿ-211, ಸ್ನಾತಕೋತ್ತರ-9761, ಸ್ನಾತಕೋತ್ತರ ಡಿಪ್ಲೊಮಾ-8, ಫೆಲೋಷಿಪ್-256, ಸರ್ಟಿಫಿಕೇಟ್ ಕೋರ್ಸ್-15 ಹಾಗೂ 62,419 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ನೀಡಲಾಯಿತು. ಈ ಬಾರಿ 115 ಚಿನ್ನದ ಪದಕಗಳನ್ನು 103 ವಿದ್ಯಾರ್ಥಿಗಳು ಕೊರಳಿಗೇರಿಸಿಕೊಂಡರು. ಇವರ ಪೈಕಿ 84 ವಿದ್ಯಾರ್ಥಿನಿಯರು ಎಂಬುದು ವಿಶೇಷ.
ಕಟೀಲಿನ ಶ್ರುತಿಕಾಗೆ 2 ಚಿನ್ನದ ಪದಕ ಪ್ರಾಪ್ತಿ
ಘಟಿಕೋತ್ಸವದಲ್ಲಿ ಕಟೀಲಿನ ಶ್ರುತಿಕಾ ಅವರಿಗೆ ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿನ ಸಾಧನೆಗಾಗಿ 2 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಶ್ರುತಿಕಾ ಮಂಗಳೂರಿನ ಎ.ಜೆ. ಅಲೈಡ್ ಹೆಲ್ತ್ ಸೈನ್ಸನ್ಸ್ ಸಂಸ್ಥೆಯಲ್ಲಿ ಬಿಎಸ್ಸಿ ನ್ಯೂರೋಸೈನ್ಸ್ ವಿದ್ಯಾರ್ಥಿನಿಯಾಗಿದ್ದು, ಕಟೀಲು ಮಲ್ಲಿಗೆ ಅಂಗಡಿಯ ದಯಾನಂದ ಪೂಜಾರಿ ಮತ್ತು ಸವಿತಾ ದಂಪತಿಯ ಪುತ್ರಿಯಾಗಿದ್ದಾರೆ. ಚಿನ್ನದ ಪದಕ ಸಾಧಕಿ ಶ್ರುತಿಕಾಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದವು ಶುಭ ಹಾರೈಸಿದ್ದಾರೆ.
"
ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ವೈದ್ಯರನ್ನು ಸೃಷ್ಟಿಸುವ ರಾಜ್ಯವಾಗಿದೆ. ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಸ್ನೇಹಿ ವಾತಾವರಣದ ಕ್ಯಾಂಪಸ್‌ನಿಂದಾಗಿ ಹೆಚ್ಚಿನ ಡಾಕ್ಟರ್ಸ್ ಹೊರಬರುತ್ತಿದ್ದಾರೆ. ಸರ್ಕಾರ ಪ್ರತೀ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ನಿರ್ಮಿಸುವ ಗುರಿಯತ್ತ ಸಾಗಿದೆ. ಈಗ ಪ್ರತೀ ಜಿಲ್ಲೆಯಲ್ಲೂ ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವತ್ತ ದೃಷ್ಟಿಹರಿಸಿದೆ.
- ಡಾ. ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ