ಬೆಂಗಳೂರು: ಪ್ರೇಯಸಿಯ ಪಾಲಕರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.
ಬೆದರಿಕೆ ಹಾಕಿದ್ದ ಸೈಯದ್ ಆಮೀನ್ (24) ಹಾಗೂ ಆತನ ಸ್ನೇಹಿತ ಆನ್ (24) ಎಂಬಾತರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಈಗಾಗಲೇ ಕೃತ್ಯಕ್ಕೆ ಏರ್ಪಿಸ್ತೂಲ್ ಅನ್ನೇ ಬಳಸಿರುವುದನ್ನು ದೃಢ ಪಡಿಸಿಕೊಂಡ ಪೊಲೀಸರು, ಇಬ್ಬರನ್ನು ಬಂಧಿಸದೇ ನೋಟೀಸ್ ನೀಡಿದ್ದಾರೆ. ಭಾನುವಾರ ಆರೋಪಿಗಳಿಂದ ಪಿಸ್ತೂಲ್ ಜಪ್ತಿ ಮಾಡಲಾಗುವುದು ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ ಏರ್ ಪಿಸ್ತೂಲ್ ಜಪ್ತಿ ಮಾಡಿದ ಬಳಿಕ ಅದನ್ನು ಎಫ್ಎಸ್ಎಲ್ಗೆ ಕಳುಹಿಸಲಾಗುವುದು. ಅಲ್ಲಿಂದ ವರದಿ ಬಂದ ಬಳಿಕ ಆರೋಪಿಗಳನ್ನು ಬಂಧಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿನ್ನೆಲೆ: ಆರೋಪಿ ಸೈಯದ್ ಆಮೀನ್ ಬಟ್ಟೆ ಅಂಗಡಿ ಮಾಲೀಕನ ಮಗಳನ್ನು ಪ್ರೀತಿಸುತ್ತಿದ್ದ. ಮದುವೆ ವಿಚಾರ ಸಂಬಂಧ ಕಳೆದ ವಾರ ಎರಡೂ ಕುಟುಂಬದವರು ಮಾತುಕತೆ ಮಾಡಿದ್ದರು. ಈ ನಡುವೆ ಸೈಯದ್, ತನ್ನ ಪ್ರೇಯಸಿಯ ತಂದೆ ಬಟ್ಟೆ ಅಂಗಡಿ ಬಳಿ ಹೋಗಿ ಪಿಸ್ತೂಲ್ ತೋರಿಸಿ ಎಲ್ಲರಿಗೂ ಬೆದರಿಕೆ ಹಾಕಿದ್ದಲ್ಲದೆ, ಫೈರಿಂಗ್ ಮಾಡಲು ಮುಂದಾಗಿದ್ದ. ಆದರೆ, ಆತನೊಂದಿಗೆ ಬಂದಿದ್ದ ಸ್ನೇಹಿತ ಆನ್ ಮಧ್ಯಪ್ರವೇಶಿಸಿ ಫೈರಿಂಗ್ ಯತ್ನ ತಡೆದಿದ್ದಾನೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ. ಘಟನೆಯಿಂದ ಆತಂಕಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿದ ಪುಟ್ಟೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.