ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್ 
ಬೆಂಗಳೂರು

ಮೆಟ್ಟಿಲಿನಿಂದ ಜಾರಿ ಬಿದ್ದ ಪ್ರದೀಪ್ ಈಶ್ವರ್: ಬಲಗಾಲು ಮುರಿತ, ಆದ್ರೂ ನನ್ನ ಕೆಲಸ ನಿಲ್ಲಲ್ಲ ಎಂದ ಕಾಂಗ್ರೆಸ್​ ಶಾಸಕ..! Pradeep Eshwar

ಕಳೆದ ಮೂರು ದಿನಗಳ ಹಿಂದೆ ತಮ್ಮ ನಿವಾಸದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್​ ( Pradeep Eshwar ) ಅವರು ಮನೆಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಪರಿಣಾಮ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಮೂಳೆ ಮುರಿತಕ್ಕೊಳಗಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ತಮ್ಮ ನಿವಾಸದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು, ಶಾಸಕರ ಬಲಗಾಲಿನ ಮೂಳೆ ಮುರಿದಿರುವುದನ್ನು ದೃಢಪಡಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮೂಳೆ ಸರಿಯಾಗಿ ಜೋಡಣೆಯಾಗಲು ಕಾಲಿಗೆ ರಾಡ್ ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಆರು ವಾರಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.

ಗಂಭೀರ ಗಾಯ ಮತ್ತು ವೈದ್ಯರ ವಿಶ್ರಾಂತಿಯ ಸಲಹೆಯ ನಡುವೆಯೂ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕರ್ತವ್ಯಪ್ರಜ್ಞೆ ಮತ್ತು ವೃತ್ತಿಬದ್ಧತೆಯನ್ನು ಮೆರೆದಿದ್ದಾರೆ. ಕಾಲು ಮುರಿದುಕೊಂಡಿದ್ದರೂ ತಮ್ಮ 'ಪರಿಶ್ರಮ ನೀಟ್ ಅಕಾಡೆಮಿ'ಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಹಾಗೂ ಕಾರ್ಯನಿರ್ವಹಿಸುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ದೃಢ ಸಂಕಲ್ಪ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ 'ಕಾಯಕವೇ ಕೈಲಾಸ' ಎಂಬ ಶೀರ್ಷಿಕೆಯಡಿ ಪೋಸ್ಟ್ ಹಂಚಿಕೊಂಡಿರುವ ಶಾಸಕರು, ತಾವು ಬಿದ್ದು ಗಾಯಗೊಂಡಿರುವ ವಿಚಾರವನ್ನು ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆಗೆ ತಿಳಿಸಿದ್ದಾರೆ. ಎಷ್ಟೇ ನೋವು ಮತ್ತು ಅಡೆತಡೆಗಳು ಎದುರಾದರೂ ತಮ್ಮ ಕೆಲಸ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕದಿಂದ ಹಿಂದೆ ಸರಿಯುವುದಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.