ಇ-ಖಾತಾ 
ಬೆಂಗಳೂರು

ಇ-ಖಾತಾ ಕೇಂದ್ರ ಸ್ಥಾಪನೆಗೆ ಸ್ಥಳದ ಕೊರತೆ | E-KHATA

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಬಾಡಿಗೆ, ಭೋಗ್ಯ ಕಟ್ಟಡಗಳ ಬಳಕೆ ಸಾಧ್ಯತೆ
  • ಪಾಸ್​ಪೋರ್ಟ್​ ಸೇವಾ ಕೇಂದ್ರದ ಮಾದರಿಗೆ ಆದ್ಯತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪಾಸ್​ಪೋರ್ಟ್​ ಸೇವಾ ಕೇಂದ್ರದ ಮಾದರಿಯಲ್ಲಿ ಇ-ಖಾತಾ ಸೇವಾ ಕೇಂದ್ರಗಳನ್ನು ಆರಂಭಿಸಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಯೋಜನೆ ಹಾಕಿಕೊಂಡಿದ್ದರೂ, ಸೂಕ್ತ ಸ್ಥಳದ ಕೊರತೆ ಯೋಜನೆ ಆರಂಭದಲ್ಲೇ ಅಡಚಣೆಯಾಗಿ ಪರಿಣಮಿಸಿದೆ.
ಜಿಬಿಎ ಕಂದಾಯ ಇಲಾಖೆಯ ಇ-ಖಾತಾ ವಿತರಣೆಯಲ್ಲಿನ ವಿಳಂಬ ಹಾಗೂ ಸಾರ್ವಜನಿಕರ ಗೊಂದಲ ನಿವಾರಿಸಲು 10 ಸೇವಾ ಕೇಂದ್ರ ಆರಂಭಿಸಲು ತೀಮಾರ್ನ ಮಾಡಲಾಗಿತ್ತು. ಆದರೆ, ಇ&ಖಾತಾ ಕೇಂದ್ರಗಳಿಗೆ ಸ್ಥಳ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 5 ಪಾಲಿಕೆಯಲ್ಲಿ ತಲಾ 2 ವಲಯಗಳಿವೆ. ವಲಯಕ್ಕೊಂದು ಕೇಂದ್ರವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ನಗರದೆಲ್ಲೆಡೆ ಇ&ಖಾತಾ ಸಂಬಂಧಿತ ಸೇವಾ ತೊಂದರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಅರ್ಜಿಗಳು ಶೀಘ್ರದಲ್ಲಿ ಪರಿಹಾರವಾಗುವ ಬಗ್ಗೆ ಅಧಿಕಾರಿಗಳಲ್ಲೂ ಗೊಂದಲವಿದೆ. ಅನೇಕರ ಇ-ಖಾತಾ ಅರ್ಜಿಗಳು ಅನುಮೋದನೆಗಾಗಿ ಬಾಕಿ ಇರುವುದು, ಪರಿಶೀಲನೆಗೆ ಒಳಪಡದಿರುವುದು, ಕೆಲವರಿಗೆ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಿ ವಿಚಾರಿಸಬೇಕಾದ ಪರಿಸ್ಥಿತಿಯೂ ಎದುರಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಪಾಸ್​ಪೋರ್ಟ್​ ಸೇವಾ ಕೇಂದ್ರ ಮಾದರಿಯಲ್ಲಿ ಇ&ಖಾತಾ ಸೇವಾ ಕೇಂದ್ರಗಳನ್ನು ತೆರೆಯುವ ಯೋಜನೆ ರೂಪಿಸಿದೆಯಾದರೂ ಸ್ಥಳದ ಅಭಾವ ಜಿಬಿಎಗೆ ಕಾಡುತ್ತಿದೆ.
ಬಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್​ ಸಂದರ್ಶನವೊಂದರಲ್ಲಿ ಮಾತನಾಡಿ, ಅಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಐದು ಇ&ಖಾತಾ ಸೇವಾ ಕೇಂದ್ರಗಳನ್ನು ತೆರೆಯುವ ಉದ್ದೇಶವಿದ್ದು, ಅನುಕೂಲಕರವಾದ ಸ್ಥಳಗಳಿಗಾಗಿ ಹುಡುಕಾಟ ಮುಂದುವರಿದಿದೆ. ಹೊಸ ಕೇಂದ್ರಗಳಿಗಾಗಿ ಬಾಡಿಗೆ ಅಥವಾ ಭೋಗ್ಯ ಆಧಾರಿತ ಕಟ್ಟಡಗಳ ಬಳಕೆಯ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಈವರೆಗೆ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 8.21 ಲಕ್ಷ ಇ&ಖಾತಾ ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 8.16 ಲಕ್ಷ ಅರ್ಜಿಗಳು ಅನುಮೋದನೆ ಪಡೆದಿವೆ. ಈ ಪ್ರಕ್ರಿಯೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಇ-ಖಾತೆ ನೀಡುವುದರಲ್ಲಿ ಉಂಟಾದ ಸಮಸ್ಯೆ ಬಗೆಹರಿಸಲು ಆಡಿಟ್​ ತಂಡ ರಚನೆ ಮಾಡಲಾಗಿದೆ. ಇ-&ಖಾತೆ ತಿರಸ್ಕರಿಸಲ್ಪಟ್ಟರೆ 25 ಮಂದಿ ಅಧಿಕಾರಿಗಳ ತಂಡ ಮೇಲ್ವಿಚಾರಣೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

ಫೇಸ್​ಲೆಸ್​ ಇ-ಖಾತಾ

ಇ-ಖಾತಾ ನೋಂದಣಿಯಲ್ಲಿ ಪ್ರಮುಖವಾಗಿ ಆಗುತ್ತಿದ್ದ ಸಮಸ್ಯೆಗಳಿಗೆ ಜಿಬಿಎ ಪರಿಹಾರ ನೀಡುವುದಕ್ಕೆ ಮುಂದಾಗಿದ್ದು, ಫೇಸ್​ಲೆಸ್​, ಕಾಂಟ್ಯಾಕ್ಟ್​ಲೆಸ್​ ಮತ್ತು ಆನ್​ಲೈನ್​ ಇ-ಖಾತಾ ಜಾರಿ ಮಾಡಿದೆ. ಈ ಹೊಸ ವ್ಯವಸ್ಥೆಯ ಮೂಲಕ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್​ಒ ಅಥವಾ ಕೇಸ್​ ವರ್ಕರ್​ ಆಸ್ತಿ ದಾಖಲೆಗಳನ್ನು ಮಾತ್ರ ಪರಿಶೀಲಿಸಿದರೆ ಸಾಕು ಎಂದು ಜಿಬಿಎ ಮಾಹಿತಿ ನೀಡಿದೆ.