ಜಿಬಿಎ 
ಬೆಂಗಳೂರು

ಪಾಲಕೆ ವ್ಯಾಪ್ತಿಯಲ್ಲಿ ಮನೆಗಣತಿ ಆರಂಭ| GBA

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತ ಗೃಹಗಳ ಸಮೀಕ್ಷೆ ಮೇ 15ರ ವರೆಗೆ ನಿಗದಿ
  • ಮುನೀಶ್​ ಮೌದ್ಗಿಲ್​ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಎಲ್ಲೆಡೆ ಭೇಟಿ ನೀಡಿ ಗೃಹಗಳ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್​ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತಣಾಡಿ, 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ&-2027ರ ಭಾಗವಾಗಿ ಮೊದಲ ಹಂತದಲ್ಲಿ "ಮನೆ ಪಟ್ಟಿ ಮತ್ತು ಮನೆಗಳ ಗಣತಿ' ಗುರುವಾರದಿಂದ (ಏ. 16) ಆರಂಭವಾಗಿದ್ದು, ಮೇ 15ರ ವರೆಗೆ ನಡೆಯಲಿದೆ. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ವೇಳೆ ಎಲ್ಲ ನಾಗರಿಕರು ಸಿಬ್ಬಂದಿಗೆ ಸಹಕಾರ ನೀಡಿ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ 5-8 ನಿಮಿಷಗಳಲ್ಲಿ ಮನೆ ಗಣತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ 23,000ಕ್ಕೂ ಹೆಚ್ಚು ಗಣತಿದಾರರು ಮತ್ತು 2,500ಕ್ಕೂ ಹೆಚ್ಚು  ಮೇಲ್ವಿಚಾರಕರು ಶ್ರಮಿಸಲಿದ್ದಾರೆ. 2ನೇ ಹಂತದಲ್ಲಿ ಏಪ್ರಿಲ್​ 2027ರಲ್ಲಿ ಜನಗಣತಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಸ್ವಯಂಗಣತಿಯಲ್ಲಿ ಶೇ.2 ಮಾಹಿತಿ: ಏ.15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ಶೇ.2ಕ್ಕಿಂತ ಕಡಿಮೆ ಮಂದಿ ಪಾಲ್ಗೊಂಡಿದ್ದಾರೆ. ಗುರುವಾರದಿಂದ ಗಣತಿದಾರರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮನೆ-ಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಬಾಗಿಲಿಗೆ ಸ್ಟಿಕ್ಕರ್​ ಅಂಟಿಸಿ, ಅದರಲ್ಲಿ ಮೊಬೈಲ್​ ಸಂಖ್ಯೆ ನಮೂದಿಸಲಾಗುವುದು. ನಂತರ ಸಂಬಂಧಪಟ್ಟ ಚಾರ್ಜ್​ ಅಧಿಕಾರಿ ಅಥವಾ ಗಣತಿದಾರರಿಗೆ ಕರೆ ಮಾಡಿದರೆ ಬಂದು ಗಣತಿ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿಸಿದರು.
10 ಸಾವಿರ ಶಿಕ್ಷಕರ ನಿಯೋಜನೆ
ಮನೆಗಣತಿ ಕಾರ್ಯದಲ್ಲಿ 26 ಸಾವಿರ ಸಿಬ್ಬಂದಿ ಪೈಕಿ 10 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಅಂಗವಿಕಲರು, ಒಂದು ವರ್ಷದೊಳಗಿನ ಮಕ್ಕಳಿರುವ ತಾಯಂದಿರು ಹಾಗೂ ಇತರ ಕಾರಣಗಳಿಂದ ಸುಮಾರು 7-8 ಸಾವಿರ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ. ನಗರದಲ್ಲಿ 23 ಸಾವರ ಗಣತಿದಾರರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬರಿಗೆ ಸುಮಾರು 200 ಮನೆಗಳ ಜವಾಬ್ದಾರಿ ನೀಡಲಾಗಿದೆ ಎಂದು ಮುನೀಶ್​ ಮೌದ್ಗಿಲ್​ ಹೇಳಿದ್ದಾರೆ.
ಗಣತಿ ವೇಳೆ ಸಂಗ್ರಹಿಸುವ ಮಾಹಿತಿಗಳು
ಮನೆಯ ಮಾಹಿತಿ, ಕಟ್ಟಡದ ಸಂಖ್ಯೆ, ನೆಲ, ಗೋಡೆ ಮತ್ತು ಮೇಲ್ಛಾವಣಿ ನಿಮಾರ್ಣಕ್ಕೆ ಬಳಸಿದ ವಸ್ತುಗಳು,  ಮನೆಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕುಟುಂಬದ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಲಿಂಗ ಮತ್ತು ಜಾತಿ, ಕೊಠಡಿಗಳ ಸಂಖ್ಯೆ, ವಿವಾಹಿತರ ಸಂಖ್ಯೆ ಜತೆಗೆ ಕುಡಿಯುವ ನೀರಿನ ಮೂಲ, ಶೌಚಗೃಹ ಸೌಲಭ್ಯ, ಮಲಿನ ನೀರಿನ ಹರಿವು ವ್ಯವಸ್ಥೆ,  ಸ್ನಾನಗೃಹ ಸೌಲಭ್ಯ, ಅಡುಗೆಗೆ ಬಳಸುವ ಮುಖ್ಯ ಇಂಧನದ ಬಗ್ಗೆ ಗಣತಿದಾರರು ಕೇಳಿದ್ದಾರೆ.  ರೇಡಿಯೋ/ ಟ್ರಾನ್ಸಿಸ್ಟ್ಟರ್​, ಟಿ.ವಿ., ಇಂಟರ್​ನೆಟ್​ ಸೌಲಭ್ಯ, ಕಂಪ್ಯೂಟರ್​/ ಲ್ಯಾಪ್​ಟಾಪ್​, ಮೊಬೈಲ್​ ಫೋನ್​, ಟೆಲಿಫೋನ್​,  ದ್ವಿಚಕ್ರ/ ನಾಲ್ಕು ಚಕ್ರ ವಾಹನಗಳ ಬಗ್ಗೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೌದ್ಗಿಲ್​ ತಿಳಿಸಿದ್ದಾರೆ.