ದೀಪಾವಳಿ ಹಬ್ಬದಲ್ಲಿ ಪಟಾಕಿ ಸಂಭ್ರಮ  
ಬೆಂಗಳೂರು

ರಾಜಧಾನಿಯಲ್ಲಿ ನರಕಚತುರ್ದಶಿ ಸಡಗರ

* ಮನೆ-ಮಳಿಗೆಗಳಲ್ಲಿ ಸಾಂಪ್ರದಾಯಿಕ ಆಚರಣೆ * ಎಲ್ಲೆಡೆ ಸಿಡಿಮದ್ದುಗಳ ಸಂಭ್ರಮ

ಬೆಂಗಳೂರು: ಮನೆ- ಮನೆಗಳಲ್ಲಿ ಅಭ್ಯಂಗ ಸ್ನಾನ, ವಿಶೇಷ ಪೂಜೆ, ದೀಪಾಲಂಕಾರ, ಪಟಾಕಿ ಸದ್ದಿನ ನಡುವೆ ಹಬ್ಬದ ಸಂಭ್ರಮ. ಬೆಳಕಿನ ಹಬ್ಬ ದೀಪಾವಳಿಯ ಮೊದಲ ದಿನವಾದ ಭಾನುವಾರ ನಗರದಲ್ಲಿ ನರಕಚತುರ್ದಶಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾದ ಈ ಹಬ್ಬದ ಅಂಗವಾಗಿ ನಗರದ ಮನೆ-ಮನೆಗಳಲ್ಲೂ ಸಾಂಪ್ರದಾಯಿಕ ಆಚರಣೆಗಳು ಕಳೆಗಟ್ಟಿದ್ದವು.

ಹಬ್ಬದ ಪ್ರಯುಕ್ತ ಸೂರ್ಯೋದಯಕ್ಕೂ ಮುನ್ನವೇ ಜನರು ಎದ್ದು ಎಳ್ಳೆಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡಿದರು. ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಸಂಕೇತವಾಗಿ ಆಚರಿಸುವ ಸಂಪ್ರದಾಯವನ್ನು ಪಾಲಿಸಿ, ಹೊಸ ಬಟ್ಟೆಗಳನ್ನು ಧರಿಸಿ ಕುಟುಂಬಸಮೇತರಾಗಿ ದೇವರ ಪೂಜೆ ಸಲ್ಲಿಸಿದರು. ನೀರು ತುಂಬುವ ಹಬ್ಬ ಹಾಗೂ ಎಣ್ಣೆ-ನೀರಿನ ಸ್ನಾನದ ಆಚರಣೆ ಮನೆಗಳಲ್ಲಿ ವಿಶೇಷ ಮೆರುಗು ತಂದಿತ್ತು.

ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ಆಚರಿಸುವ ನರಕಚತುರ್ದಶಿಯಂದು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಮಾಡಲಾಗಿತ್ತು. ಭಕ್ತರು ಕುಟುಂಬಸಮೇತರಾಗಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸಂಜೆ ಮನೆಗಳ ಹೊಸ್ತಿಲು ಹಾಗೂ ಮುಂಭಾಗದಲ್ಲಿ ಸಾಲು ಸಾಲು ದೀಪಗಳನ್ನು ಬೆಳಗಿಸಿ, ಆಕಾಶಬುಟ್ಟಿಗಳನ್ನು ತೂಗುಹಾಕಿ ಹಬ್ಬದ ಹಿಗ್ಗಿನಲ್ಲಿ ಬೀಗಿದರು.

ಮಳಿಗೆಗಳಲ್ಲಿ ಪೂಜೆ:

ಇದೇ ದಿನ ಅಮಾವಾಸ್ಯೆಯೂ ಬಂದ ಹಿನ್ನೆಲೆಯಲ್ಲಿ ಸಂಜೆ ಅಂಗಡಿ-ಮುಂಗಟ್ಟುಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸಿ ಸಿಹಿ ವಿತರಿಸಲಾಯಿತು. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನ ಕತ್ತಲೆಯನ್ನು ದೂರ ಮಾಡಿ ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ ಎಂದು ಜನರು ಪ್ರಾರ್ಥಿಸಿದರು. ಸೋಮವಾರವೂ ಅಮಾವಾಸ್ಯೆ ಇರುವ ಹಿನ್ನೆಲೆ ಹೆಚ್ಚಿನವರು ಲಕ್ಷ್ಮೀಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಹುತೇಕ ಮನೆಗಳಲ್ಲಿ ಸಾಂಪ್ರದಾಯಿಕ ಸಿಹಿ ತಿನಿಸಾದ ಕಜ್ಜಾಯ ತಯಾರಿಸುವ ಕಾರ್ಯವೂ ನಡೆಯುತ್ತಿತ್ತು.

ಪಟಾಕಿ ಸಂಭ್ರಮ

ದೀಪಾವಳಿ ಹಬ್ಬವೆಂದರೆ ಮಹಿಳೆಯರಿಗೆ ಮನೆ ಅಲಂಕಾರ, ದೀಪಗಳನ್ನು ಬೆಳಗಿಸುವುದು ಹಾಗೂ ಬಗೆಬಗೆಯ ಖಾದ್ಯಗಳನ್ನು ತಯಾರಿಸುವ ಖುಷಿಯಾದರೆ, ಮಕ್ಕಳಿಗೆ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸುವುದೇ ವಿಶೇಷ ಆಕರ್ಷಣೆ. ದೊಡ್ಡವರು ಬೃಹತ್ ಸದ್ದಿನ ಪಟಾಕಿ ಸಿಡಿಸಿದರೆ, ಪುಟಾಣಿ ಮಕ್ಕಳು ಪಟಾಕಿ ಗನ್‌ಗಳನ್ನು ಹಿಡಿದು ನಲಿಯುತ್ತಿದ್ದರು. ಮನೆಗಳ ಮುಂದೆ ಪಟಾಕಿ ಸದ್ದು ಹಾಗೂ ದೀಪಗಳ ಬೆಳಕು ಹಬ್ಬದ ವಾತಾವರಣವನ್ನು ಮತ್ತಷ್ಟು ರಂಗೇರಿಸಿತ್ತು.

ಭಾನುವಾರವೂ ಖರೀದಿ ಭರಾಟೆ

ದೀಪಾವಳಿ ಹಬ್ಬಕ್ಕೆ ಇನ್ನೂ 2 ದಿನಗಳ ಸಂಭ್ರಮ ಬಾಕಿ ಇದ್ದ ಹಿನ್ನೆಲೆಯಲ್ಲಿ ಭಾನುವಾರವೂ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ನೋಮಿ ಆಚರಿಸುವ ಸಂಪ್ರದಾಯ ಹೊಂದಿರುವವರು ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನೋಮುದಾರ, ನೋಮಡಿಕೆ, ವೀಳ್ಯದೆಲೆ ಹಾಗೂ ಅರಿಶಿನದ ಕೊಂಬುಗಳನ್ನು ಖರೀದಿಸಿದರು. ಮನೆಗಳ ಮುಂದೆ ದೀಪ ಬೆಳಗಿಸಲು ಮಣ್ಣಿನ ಹಣತೆಗಳ ಖರೀದಿಯೂ ಜೋರಾಗಿತ್ತು. ಅಂಗಡಿ- ಮುಂಗಟ್ಟುಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸುವವರು ಹಾಗೂ ಅದ್ದೂರಿಯಾಗಿ ಹಬ್ಬ ಆಚರಿಸುವವರು ಪೂಜಾ ಸಾಮಗ್ರಿಗಳ ಜತೆಗೆ ಬಾಳೆಕಂದು, ಬೂದಗುಂಬಳ, ಹೂವು ಹಾಗೂ ನಿಂಬೆಹಣ್ಣುಗಳನ್ನು ಖರೀದಿಸಿದರು. ಒಟ್ಟಾರೆ ದೀಪಗಳ ಬೆಳಕು, ಪಟಾಕಿಗಳ ಸದ್ದು, ಪೂಜೆ- ಪುನಸ್ಕಾರ ಹಾಗೂ ಖರೀದಿ ಸಂಭ್ರಮದಿಂದ ನಗರ ದೀಪಾವಳಿಯ ಸಂಭ್ರಮದಲ್ಲಿ ಮಿಂದೆದ್ದಿತ್ತು.