ನೃತ್ಯ ಪ್ರದರ್ಶನ: ಶುಭಾ ಧನಂಜಯ್​ 
ಬೆಂಗಳೂರು

ಧ್ವನಿಸಾಂದ್ರಿಕೆ ಹಣದಿಂದ ಕಲಾವಿದರಿಗೆ ನೆರವು | SUPPORT TO ARTIST

ಪ್ರಮುಖ ಮುಖ್ಯಾಂಶಗಳು

  • ಅನನ್ಯ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಆರ್​.ವಿ. ರಾವೇಂದ್ರ ಹೇಳಿಕೆ
  • ಸಾಲಭಂಜಿಕ' ಧ್ವನಿಸಾಂದ್ರಿಕೆ ಬಿಡುಗಡೆ, ನೃತ್ಯವೈಭವ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಧ್ವನಿಸಾಂದ್ರಿಕೆಯ ಮಾರಾಟದಿಂದ ಬರುವ ಹಣವನ್ನು ಸಮಾಜಸೇವೆ, ಕಲಾವಿದರ ಕ್ಷೇಮಕ್ಕೆ ಬಳಸುವುದು ನಮ್ಮ ಪದ್ಧತಿ ಎಂದು ಅನನ್ಯ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಆರ್​.ವಿ. ರಾವೇಂದ್ರ ತಿಳಿಸಿದ್ದಾರೆ.
ನೃತ್ಯಾಂಜಲಿ ಸಂಸ್ಥೆ ಹಾಗೂ ಅಮೆರಿಕದ ಟೆಕ್ಸಾಸ್​ನ ಕಾವೇರಿ ನಾಟ್ಯಯೋಗ ಸಂಸ್ಥೆ ಜಂಟಿ ಆಶ್ರಯದಲ್ಲಿ ಬಸವನಗುಡಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆ್​ ವರ್ಲ್ಡ್​ ಕಲ್ಚರ್​ನ ವಾಡಿಯಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ "ಸಾಲಭಂಜಿಕ' ಚೆನ್ನಕೇಶವನ ಮದನಿಕೆಯರು ಎಂಬ ಧ್ವನಿಸಾಂದ್ರಿಕೆ ಬಿಡುಗಡೆ ಹಾಗೂ ನೃತ್ಯವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಕಲಾವಿದರು ಆರೋಗ್ಯದ ತೊಂದರೆಯಿಂದ ಸಂಕಷ್ಟದಲ್ಲಿ ಸಿಲುಕುತ್ತಿರುವುದನ್ನು ಕಂಡು, ಅವರಿಗೆ ನೆರವಾಗುವ ಉದ್ದೇಶದಿಂದ ಶುರು ಮಾಡಿದ್ದೇ "ಅನನ್ಯ ಆರೋಗ್ಯಧಾರೆ' ಯೋಜನೆ. ಯೋಜನೆಗೆ ಹಣ ಕೂಡಿಸುವಲ್ಲಿ ಕಲಾವಿದರೇ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನೇರವಾಗಿ ಧನಸಹಾಯ ಮಾಡಿದವರು ಮಾತ್ರವಲ್ಲ, ಧ್ವನಿಸಾಂದ್ರಿಕೆಯನ್ನು ಸಂಪೂರ್ಣ ತಮ್ಮ ಖರ್ಚಿನಲ್ಲಿ ಸೃಷ್ಟಿಸಿ, ಮಾರಾಟಕ್ಕೆ ನನಗೆ ತಂದುಕೊಟ್ಟ ನಗರದ ಶ್ರೇಷ್ಠ ಕಲಾವಿದರು ಇದ್ದಾರೆ. ಅದರಲ್ಲಿ ಬಂದ ಹಣದಿಂದ ಚಟುವಟಿಕೆ ಇನ್ನಷ್ಟು ವಿಸ್ತರಣೆಗೊಂಡಿದೆ. ಇಲ್ಲಿ ಡಾ.ಶ್ರೀಧರ ಅಕ್ಕಿಹೆಬ್ಬಾಳು ಅವರು ಕೂಡ ಇದೇ ರೀತಿ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡುವುದಲ್ಲದೆ, ಮಕ್ಕಳಿಗೆ, ಕಲಾವಿದರಿಗೆ ಪೋಷಣೆ ನೀಡುವ ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದರು.
ವೈದ್ಯ, ಯೋಗಾಚಾರ್ಯ, ನೃತ್ಯ ನಿರ್ಮಾಪಕ ಡಾ. ಶ್ರೀಧರ ಅಕ್ಕಿಹೆಬ್ಬಾಳು ಮಾತನಾಡಿ, ಕಲೆಯ ಮೇಲೆ ಆಸಕ್ತಿ ಬೆಳೆಸಿಕೊಂಡಿರುವ ಮಕ್ಕಳಿಗೆ, ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಹಿಮ್ಮೇಳ, ಪಕ್ಕವಾದ್ಯಗಳ ಜತೆ ನೃತ್ಯ ಅಭ್ಯಸಿಸಿ ಪ್ರದರ್ಶನ ನೀಡುವುದು ಕಷ್ಟ ಕೆಲಸ. ಅದಕ್ಕೆ ಬೇಕಾದ ಆರ್ಥಿಕ ಸ್ಥಿತಿಯೂ ಅವರಲ್ಲಿ ಇರುವುದಿಲ್ಲ. ಅಂತಹವರಿಗೆ ಇಂಥ ಧ್ವನಿಸಾಂದ್ರಿಕೆ ತುಂಬ ಪ್ರಯೋಜನಕಾರಿ. ಅಭ್ಯಾಸ, ಪ್ರದರ್ಶನಗಳಿಗೂ ಇದನ್ನು ಸುಲಭದಲ್ಲಿ ಬಳಸಿಕೊಳ್ಳಬಹುದು  ಎಂದರು.
ನಾಟ್ಯಗುರು ಪೂರ್ಣಿಮಾ ಅಶೋಕ್​ ಅವರು "ಸಾಲಭಂಜಿಕ' ಚೆನ್ನಕೇಶವನ ಮದನಿಕೆಯರು ನೃತ್ಯ ನೃತ್ಯ ವೈಭವದ ಹಿನ್ನೆಲೆ, ಅಷ್ಟನಾಯಕಿಯರ ಪ್ರಸ್ತುತಿ ಬಗ್ಗೆ ಪ್ರೇಕ್ಷಕರಿಗೆ ವಿವರಿಸಿದರು. ಧ್ವನಿಸಾಂದ್ರಿಕೆಯ ಸಂಗೀತ ನಿರ್ದೇಶಕ ವಿದ್ವಾನ್​ ಬಾಲಸುಬ್ರಮಣ್ಯ ಶರ್ಮ, ಸಂಗೀತಗಾರ್ತಿ ಡಾ. ಟಿ.ಎಸ್​. ಸತ್ಯವತಿ ಮತ್ತಿತರರು ಉಪಸ್ಥಿತರಿದ್ದರು.
ಜನಮನ ಗೆದ್ದ ನೃತ್ಯ ಪ್ರದರ್ಶನ
ಬೇಳೂರು ಹಳೆಬೀಡಿನ ಶಿಲಾಬಾಲಿಕೆಗಳ ಕುರಿತು ಡಿ.ವಿ. ಗುಂಡಪ್ಪ ಅವರು ರಚಿಸಿರುವ "ಅಂತ@ಪುರ ಗೀತೆಗಳು' ಕೃತಿ ಆಧರಿಸಿ ಆಯ್ದ ಅಷ್ಟ ನಾಯಕಿಯರ ಪ್ರಸ್ತುತಿಯಾದ "ಸಾಲಭಂಜಿಕ' ಚೆನ್ನಕೇಶವನ ಮದನಿಕೆಯರು ಎಂಬ ನೃತ್ಯವೈಭವವನ್ನು ನಗರದ ಖ್ಯಾತ ಕಲಾವಿದರಾದ ಶುಭಾ ಧನಂಜಯ್​, ರಾಧಿಕಾ ರಾಮಾನುಜಂ, ಜನನಿ ಮುರಳಿ, ಐಶ್ವರ್ಯಾ ನಿತ್ಯಾನಂದ, ಮೇದಾ ದೀತ್​, ಪದ್ಮಿನಿ ಉಪಾದ್ಯ, ಗೌರಿ ಸಾಗರ್​ ಹಾಗೂ ರಶ್ಮಿ ಅಗರ್ವಾಲ್​ ಪ್ರದರ್ಶಿಸಿದರು. 8 ವಿಭಿನ್ನ ಸನ್ನಿವೇಶಗಳ ಪ್ರಸ್ತುತಿ ಪ್ರೇಕ್ಷಕರ ಮನಸೂರೆಗೊಂಡಿತು.