- ಸಿಬಿಟಿಸಿ ವ್ಯವಸ್ಥೆಗೆ ರೈಲ್ವೆ ಮಂಡಳಿಯಿಂದ ತಾತ್ವಿಕ ಒಪ್ಪಿಗೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ನಿರ್ಮಿಸುತ್ತಿರುವ ಗುಲಾಬಿ ಮಾರ್ಗ (ರೀಚ್&-6) ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಣೆಯಾಗಲಿರುವ ಹಂತ-2ಎ ಮತ್ತು 2ಬಿ ಒಳಗೊಂಡ ಸಂಪೂರ್ಣ ನೀಲಿ ಮಾರ್ಗದ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ.
ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ವಿಭಾಗವನ್ನು ಕಾರ್ಯಾರಂಭಗೊಳಿಸುವ ನಿಟ್ಟಿನಲ್ಲಿ ಈ ಅನುಮೋದನೆ ಪ್ರಮುಖವಾಗಿದೆ. ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಲು ಬಿಎಂಆರ್ಸಿಎಲ್ ಒಂದು ತಿಂಗಳಿನಿಂದ ರೈಲ್ವೆ ಮಂಡಳಿ ಹಾಗೂ ರೈಲು ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್ಡಿಎಸ್ಒ) ಜತೆ ನಿರಂತರ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿಮಾರ್ಣವಾಗುತ್ತಿರುವ ನೀಲಿ ಮಾರ್ಗಕ್ಕೂ ಈ ಸಿಗ್ನಲಿಂಗ್ ಅನುಮೋದನೆ ಅನ್ವಯಿಸಲಿದೆ. ನೀಲಿ ಮಾರ್ಗದ ಉದ್ದೇಶಿತ ಕಾರ್ಯಾರಂಭಕ್ಕೂ ಸಾಕಷ್ಟು ಮುಂಚಿತವಾಗಿಯೇ ಅನುಮೋದನೆ ದೊರೆತಿರುವುದರಿಂದ ಅಗತ್ಯ ಪರೀಕ್ಷೆಗಳು ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳಲು ಅನುಕೂಲವಾಗಲಿದೆ.
ಮುಂದುವರಿದ ತಾಂತ್ರಿಕ ಪ್ರಕ್ರಿಯೆ
ಗುಲಾಬಿ ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ ಇನ್ನೂ ಕೆಲವು ತಾಂತ್ರಿಕ ಹಾಗೂ ಶಾಸನಬದ್ಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ. ಆರ್ಡಿಎಸ್ಒದಿಂದ ಮಧ್ಯಂತರ ವೇಗ ಪ್ರಮಾಣೀಕರಣ, ರೈಲುಗಳ ಸಿಸಿಆರ್ಎಸ್ ಶಾಸನಬದ್ಧ ಪರಿಶೀಲನೆ, ಪ್ರಾಯೋಗಿಕ ಸಂಚಾರ, ಬಳಿಕ ಅಂತಿಮ ಶಾಸನಬದ್ಧ ಪರಿಶೀಲನೆ ಹಾಗೂ ಪ್ರಯಾಣಿಕರ ಸೇವೆ ಆರಂಭಿಸಲು ಅಗತ್ಯ ಅನುಮತಿ ಪಡೆಯುವ ಪ್ರಕ್ರಿಯೆಗಳು ಮುಂದುವರಿಯಲಿವೆ. ಉಳಿದ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಗುಲಾಬಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆ ಆರಂಭಿಸಲು ಬಿಎಂಆರ್ಸಿಎಲ್ ರೈಲ್ವೆ ಮಂಡಳಿ, ಆರ್ಡಿಎಸ್ಒ, ಸಿಸಿಆರ್ಎಸ್ ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸಲಿದೆ.