- 3 ವರ್ಷಗಳಲ್ಲಿ ಆನ್ಲೈನ್ ಮಾರಾಟ ವಾರ್ಷಿಕ <70 ಲಕ್ಷದಿಂದ 5 ಕೋಟಿಗೆ ಹೆಚ್ಚಿಸುವ ಗುರಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ದೇಶ-&ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್ಎಚ್ಡಿಸಿಎಲ್) ಕಾವೇರಿ ಹ್ಯಾಂಡಿಕ್ರಾಫ್ಟ್ ಗೆ ಹೊಸ ಡಿಜಿಟಲ್ ರೂಪ ನೀಡುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಇ-&ಕಾಮರ್ಸ್ ಪೋರ್ಟಲ್ ಅನ್ನು ಗಣಪತಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ.
ಹೊಸ ಡಿಜಿಟಲ್ ವೇದಿಕೆಯ ಮೂಲಕ ಕಾವೇರಿ ಹ್ಯಾಂಡಿಕ್ರಾಫ್ಟ್ ನ ಆನ್ಲೈನ್ ಮಾರಾಟವನ್ನು ಪ್ರಸ್ತುತ ವಾರ್ಷಿಕ 70 ಲಕ್ಷ ರೂ.ನಿಂದ ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಾಲಿ ಇ-&ಕಾಮರ್ಸ್ ಪೋರ್ಟಲ್ ಅನ್ನು 2012ರಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹೊಸ ಪೋರ್ಟಲ್ ಕೇವಲ ವಿನ್ಯಾಸ ಬದಲಾವಣೆಯಾಗಿರದೆ, ಗ್ರಾಹಕಸ್ನೇಹಿ ಹಾಗೂ ವಿಸತ ಡಿಜಿಟಲ್ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ.
ಗ್ರಾಹಕರ ಆಯ್ಕೆಗೆ ತಕ್ಕಂತೆ ಕಸ್ಟಮೈಸೇಷನ್:
ಹೊಸ ಪೋರ್ಟಲ್ನ ಪ್ರಮುಖ ಆಕರ್ಷಣೆ "ಕಸ್ಟಮೈಸ್ ಪ್ರಾಡಕ್ಟ್' ಸೌಲಭ್ಯ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಗಾತ್ರ, ವಿನ್ಯಾಸ, ಬಣ್ಣ, ವಸ್ತು, ಕೆತ್ತನೆ, ವೈಯಕ್ತೀಕರಣ, ಪ್ರಮಾಣ ಮತ್ತು ಪ್ಯಾಕೇಜಿಂಗ್ ಕುರಿತ ಬೇಡಿಕೆಗಳನ್ನು ಸಲ್ಲಿಸಬಹುದು. ಕಾರ್ಪೊರೇಟ್ ಗಿಫ್ಟಿಂಗ್ ಹಾಗೂ ವಿಶೇಷ ಕಾರ್ಯಕ್ರಮಗಳ ಅಗತ್ಯಗಳಿಗೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ಹೊಸ ಪೋರ್ಟಲ್ನಲ್ಲಿ ಶ್ರೀಗಂಧ, ರೋಸ್ವುಡ್, ಬಿದರಿ ಕಲೆ, ಚನ್ನಪಟ್ಟಣ ಲ್ಯಾಕರ್ವೇರ್, ಕಿನ್ನಾಳ ಆಟಿಕೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಲೋಹದ ಕರಕುಶಲ ಹಾಗೂ ಕೈಮಗ್ಗ-ಜವಳಿ ಉತ್ಪನ್ನಗಳು ಸೇರಿ ಕರ್ನಾಟಕದ ವೈವಿಧ್ಯಮಯ ಕರಕುಶಲ ಉತ್ಪನ್ನಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ.
ಹೊಸ ಪೋರ್ಟಲ್ ಮೂಲಕ ಕಾವೇರಿಯ ಆನ್ಲೈನ್ ಮಾರಾಟವನ್ನು ಮೂರು ವರ್ಷಗಳಲ್ಲಿ 5 ಕೋಟಿ ರೂ.ಗೆ ಹೆಚ್ಚಿಸುವುದರ ಜತೆಗೆ, ನಮ್ಮ ಕುಶಲಕರ್ಮಿಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.
ಹೊಸ ಇ-&ಕಾಮರ್ಸ್ ಪೋರ್ಟಲ್ ಮೂಲಕ ಕಾವೇರಿ ಉತ್ಪನ್ನಗಳನ್ನು ಹೆಚ್ಚು ಗ್ರಾಹಕಸ್ನೇಹಿಯಾಗಿ ದೇಶ-ವಿದೇಶದ ಗ್ರಾಹಕರಿಗೆ ತಲುಪಿಸುವುದು ನಮ್ಮ ಗುರಿ. ವಿಶೇಷವಾಗಿ ಕಸ್ಟಮೈಸ್ ಪ್ರಾಡಕ್ಟ್ ಸೌಲಭ್ಯವು ಗ್ರಾಹಕರ ಬೇಡಿಕೆ ಮತ್ತು ನಮ್ಮ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಂಪರ್ಕ ಸೇತುವಾಗಲಿದೆ.