capitalroads 
ಬೆಂಗಳೂರು

ಏಪ್ರಿಲ್ ಅಂತ್ಯದೊಳಗೆ ರಾಜಧಾನಿ ರಸ್ತೆಗಳಿಗೆ ಹೊಸರೂಪ

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿಗಳ ಉಸ್ತುವಾರಿಗೆ ಪಾಲಿಕೆ ಆಯುಕ್ತರಿಗೆ ಹೊಣೆ
  • ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ
ಬೆಂಗಳೂರು: ಮಹಾನಗರದಲ್ಲಿ ಹಾಲಿ ಪ್ರಗತಿಯಲ್ಲಿರುವ ವೈಟ್ ಟಾಪಿಂಗ್, ಬ್ಲ್ಯಾಕ್ ಟಾಪಿಂಗ್ ಸೇರಿ ಎಲ್ಲ ಬಗೆಯ ರಸ್ತೆ ಕಾಮಗಾರಿಗಳನ್ನು ಮುಂಬರುವ ಏಪ್ರಿಲ್ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಲಿಕೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಪ್ರಸ್ತುತ ಹೊರ ವರ್ತುಲ ರಸ್ತೆಯ ಮೇಲ್ದರ್ಜೆಗೆ 420 ಕೋಟಿ ರೂ. ಸೇರಿ 2,671 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಪೈಕಿ ವಾರ್ಡ್ ರಸ್ತೆಗಳನ್ನು 1,000 ಕೋಟಿ ರೂ. (82 ಪ್ಯಾಕೇಜ್) ಹಾಗೂ ರಾಜ್ಯ ಸರ್ಕಾರದ ಅನುದಾನ ಅಡಿಯಲ್ಲಿ 1,241 ಕೋಟಿ ರೂ. (81 ಪ್ಯಾಕೇಜ್) ಒಳಗೊಂಡಿದೆ. ಇವುಗಳಲ್ಲಿ ಶೇ.80 ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾರ್ಯಾದೇಶ ನೀಡಿ ಏಪ್ರಿಲ್‌ನೊಳಗೆ ಕೆಲಸ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಶ್ವಬ್ಯಾಂಕ್ ನೆರವಿನಲ್ಲಿ 2,000 ಕೋಟಿ ರೂ. ವೆಚ್ಚದ ಪ್ರವಾಹ ತಡೆ ಯೋಜನೆಗೆ ಟೆಂಡರ್ ಪೂರ್ಣಗೊಂಡಿದ್ದು, ಈಗಷ್ಟೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಎಲ್ಲ ಕೆಲಸಗಳನ್ನು ಆಯಾ ಪಾಲಿಕೆಗಳ ಆಯುಕ್ತರು, ಮುಖ್ಯ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ನಡೆಯಲಿದೆ. ಆಯಾ ದಿನ ನಡೆದ ಕಾಮಗಾರಿ ಪ್ರಗತಿಯನ್ನು ಅಂದೇ ವರದಿ ಸಲ್ಲಿಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಗಡುವಿನೊಳಗೆ ಎಲ್ಲ ಕಾಮಗಾರಿ ಪೂರ್ಣವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ 5,061 ಕೋಟಿ ರೂ. ನೆರವು:

ಕಳೆದ 3 ತಿಂಗಳಿಂದೀಚಿಗೆ ನಗರದಲ್ಲಿ ಬ್ಲ್ಯಾಕ್ ಟಾಪಿಂಗ್ ಹಾಗೂ ವೈಟ್ ಟಾಪಿಂಗ್ ರಸ್ತೆಗಳಿಗೆ ಕ್ರಮವಾಗಿ 694 ಕೋಟಿ ರೂ. ಮತ್ತು 1,700 ಕೋಟಿ ರೂ. ಸೇರಿ ಒಟ್ಟು 2,394 ಕೋಟಿ ರೂ. ಮೊತ್ತವನ್ನು ಸರ್ಕಾರ ನೀಡಿದೆ. ಕಳೆದ ವರ್ಷ ಅನುದಾನವೂ ಸೇರಿ ಒಟ್ಟು 5,061 ಕೊಟಿ ರೂ. ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ವಿವರಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್, ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ನಗರ ಡಿಸಿ ಜಗದೀಶ್, ಐದೂ ಪಾಲಿಕೆಗಳ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಏಪ್ರಿಲ್ 3ನೇ ವಾರ 6ನೇ ಗ್ಯಾರಂಟಿಗೆ ಕಾರ್ಯಕ್ರಮ:

ಜಿಬಿಎ ವ್ಯಾಪ್ತಿಯಲ್ಲಿ 10 ಲಕ್ಷ ಮಂದಿಗೆ ಇ-ಖಾತಾ ನೀಡಲಾಗಿದೆ. ಇದನ್ನು ಅಧಿಕೃತವಾಗಿ ವಿತರಿಸಲು ಏಪ್ರಿಲ್ 3ನೇ ಭಾನುವಾರ ಬೃಹತ್ ಕಾರ್ಯಕ್ರಮ ನಡೆಸಿ ಜನರಿಗೆ ಸರ್ಕಾರದ 6ನೇ ಗ್ಯಾರಂಟಿಯನ್ನು ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಬಿ ಟು ಎ ಖಾತಾ ಸೌಲಭ್ಯ ವಿತರಿಸಲು ಈಗಾಗಲೇ 7 ಸಾವಿರ ಅರ್ಜಿಗಳು ಬಂದಿದ್ದು, ಅವುಗಳನ್ನು ಸ್ಥಳಪರಿಶೀಲನೆ ನಡೆಸಿ ಸೌಲಭ್ಯ ಒದಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ:
* ಜಿಬಿಎಗೆ ಹೊಸ ಲಾಂಛನ ಸಿದ್ಧ, ಶೀಘ್ರ ಲೋಕಾರ್ಪಣೆ
* ಪಂಚ ಪಾಲಿಕೆಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ
* 10 ಲಕ್ಷ ಮಂದಿಗೆ ಇ-ಖಾತಾ ವಿತರಣೆಗೆ ಕಾರ್ಯಕ್ರಮ
* ಬಿ ಟು ಎ ಖಾತಾ ಸೌಲಭ್ಯ ನೀಡಲು ತಪಾಸಣೆಗೆ ಚುರುಕು
* ಕಲ್ಯಾಣ ಕಾರ್ಯಕ್ರಮಗಳಡಿ 30 ಸಾವಿರ ಮಂದಿಗೆ ಸೌಲಭ್ಯ
* 5 ಕಾರ್ಪೋರೇಷನ್‌ಗಳಲ್ಲಿ ಯಾಂತ್ರಿಕ ಯಂತ್ರಗಳ ಖರೀದಿ
* ಪಾಲಿಕೆ ವ್ಯಾಪ್ತಿಯಲ್ಲಿನ ಪಿಆರ್‌ಆರ್ ರಸ್ತೆಗೆ ಟಿಡಿಆರ್ ವಿತರಣೆ
* ಕಸ ವಿಲೇ/ಸಂಸ್ಕರಣೆಗೆ 2 ಸ್ಥಳದಲ್ಲಿ ತಲಾ 100 ಎಕರೆ ಖರೀದಿ.
* ಪಿಆರ್‌ಆರ್ 1ನೇ ಹಂತದ ಕಾಮಗಾರಿಗೆ ಶೀಘ್ರ ಟೆಂಡರ್ ಆಹ್ವಾನ