- ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಒತ್ತು ಅಗತ್ಯ
- ವಿಶೇಷ ಅನುದಾನಕ್ಕೆ ನಗರದ ಜನಪ್ರತಿನಿಧಿಗಳ ಆಗ್ರಹ
ಬೆಂಗಳೂರು: ಸದ್ಯದಲ್ಲೇ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರು ಮಹಾನಗರದ ಮೂಲಸೌಕರ್ಯ ಸಂಬಂಧಿತ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಸಾರ್ವಜನಿಕರು ಹಾಗೂ ನಗರ ಪ್ರತಿನಿಧಿಸುವ ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಶದಿಕ್ಕುಗಳಲ್ಲೂ ಶರವೇಗದಿಂದ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ಬೆಂಗಳೂರು ಕೆಲ ವರ್ಷಗಳಿಂದ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ನಾಗರಿಕ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಜನರು ಭಾರಿ ಸಮಸ್ಯೆಗೆ ಒಳಗಾಗಿದ್ದು, ಪರಿಹಾರಕ್ಕಾಗಿ ಸರ್ಕಾರದತ್ತ ಎದಿರುನೋಡುತ್ತಿದ್ದಾರೆ. ಆದರೆ, ಸರ್ಕಾರ ತನ್ನ ಇತಿಮಿತಿಯಲ್ಲಿ ಸೌಕರ್ಯ ಒದಗಿಸುತ್ತಿದ್ದರೂ, ಅದು ‘ಬಕಾಸುರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಯಂತಾಗುತ್ತಿದೆ.
ಬೆಂಗಳೂರು ಯೋಜಿತವಾಗಿ ನಿರ್ಮಿಸಲ್ಪಟ್ಟ ನಗರವಲ್ಲ. ಇದರಿಂದ ಹೊಸದಾಗಿ ಸೌಲಭ್ಯ ಕಲ್ಪಿಸುವುದು ಕಷ್ಟಕರ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ. ಆದರೆ, ಈಗಿನ ತಂತ್ರಜ್ಞಾನದ ಯುಗದಲ್ಲಿ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸುವುದು ಪ್ರಯಾಸವೇನಲ್ಲ. ಒಂದಿಷ್ಟು ಸವಾಲು ಇದೆಯಾದರೂ, ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಮೂಲಸೌಕರ್ಯ ಸಮಸ್ಯೆ ದಶಕಗಳಿಂದ ಮುಂದುವರಿದುಕೊಂಡೇ ಬರುತ್ತಿದೆ. ಇದನ್ನು ಗಮನಿಸಿರುವ ನಗರ ಯೋಜಕರು ಹಾಗೂ ಜನಪ್ರತಿನಿಧಿಗಳು ಮೂಲಸೌಕರ್ಯ ಕಲ್ಪಿಸಲು ದೊಡ್ಡ ಪ್ರಮಾಣದ ಅನುದಾನ ನಿಡಿದರೆ ಕಾಲಮಿತಿಯೊಳಗೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಸಲಹೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಮೂಲಸೌಕರ್ಯ ಜಾರಿ ಸರ್ಕಾರದ ಹೊಣೆ:
ರಾಜಧಾನಿ ಬೆಂಗಳೂರು ನಗರವು ಜಾಗತಿಕವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಅದೇ ಮಟ್ಟದ ಮೂಲಸೌಕರ್ಯ ಹೊಂದಿರಬೇಕೆಂಬುದು ಅಪೇಕ್ಷಣೀಯ. ಅಂತಾರಾಷ್ಟ್ರೀಯ ಖ್ಯಾತಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಸೌಲಭ್ಯ ಒದಗಿಸುವುದು ಸರ್ಕಾರದ ಹೊಣೆಗಾರಿಕೆ ಇದೆ. ಸ್ಥಳೀಯ ಆಡಳಿತವು ದೈನಂದಿನ ಸಮಸ್ಯೆಗಳನ್ನು ಪರಿಹಸಿರುವ ಜವಾಬ್ದಾರಿ ಹೊಂದಿದ್ದು, ಬೃಹತ್ ಯೋಜನೆ ಹಾಗೂ ಸೌಕರ್ಯ ಕಲ್ಪಿಸುವುದರಿಂದ ಸರ್ಕಾರ ಜಾರಿಕೊಳ್ಳುವಂತಿಲ್ಲ. ಉತ್ತಮ ರಸ್ತೆಜಾಲ, ಸಮೂಹ ಸಾರಿಗೆ, ಪರಿಸರ ಸಂರಕ್ಷಣೆ ಸೇರಿ ಬೆಂಗಳೂರನ್ನು ವಾಸಯೋಗ್ಯ ನಗರವನ್ನಾಗಿ ಮಾಡಬೇಕಾದ ಆದ್ಯ ಕರ್ತವ್ಯ ಸರ್ಕಾರದ್ದೇ ಆಗಿರುತ್ತದೆ ಎಂದು ನಗರ ಯೋಜಕರು ಪ್ರತಿಪಾದಿಸಿದ್ದಾರೆ.
ಮುಖ್ಯವಾಗಿ, ರಾಜ್ಯದ ಒಟ್ಟು ಆದಾಯದಲ್ಲಿ ಅರ್ಧದಷ್ಟು ಬೆಂಗಳೂರು ನಗರ ಒಂದರಿಂದಲೇ ಸೃಷ್ಟಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಇದೆ. ಇದನ್ನು ಗಮನಿಸಿ ನಗರದ ಬೆಳವಣಿಗೆ ದೃಷ್ಟಿಯಿಂದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಆದರೆ, ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಡೆವೆಲಪ್ಮೆಂಟ್ ಕಾಣುತ್ತಿಲ್ಲ ಎಂಬ ಆಕ್ಷೇಪ ಎಲ್ಲೆಡೆ ಕೇಳಿಬರುತ್ತಿದೆ. ಇದನ್ನು ಗಮನಿಸಿಯಾದರೂ, ಸರ್ಕಾರ ರಾಜಧಾನಿ ಅಭಿವೃದ್ಧಿಗೆ ಬೇಕಾದ ಯೋಜನೆ, ಕಾನೂನು, ಅನುದಾನ ಸೇರಿ ಎಲ್ಲ ರೀತಿಯ ಕಾರ್ಯವನ್ನು ಕಾಲಮಿತಿಯೊಳಗೆ ಕೈಗೊಳ್ಳಬೇಕು ಎಂದು ಸಂಘ-ಸಂಸ್ಥೆಗಳು ಆಗ್ರಹಿಸಿವೆ.
ವಿಶೇಷ ಅನುದಾನ ನಿಗದಿ ಮಾಡಿ:
ರಾಜಧಾನಿ ಅಭಿವೃದ್ಧಿ ಕೆಲ ವರ್ಷಗಳಿಂದ ಕುಂಠಿತವಾಗಿರುವುದರಿಂದ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಜತೆಗೆ ಸ್ಥಳೀಯ ಆಡಳಿತ 5.5 ವರ್ಷದಿಂದ ಅಸ್ತಿತ್ವದಲ್ಲಿ ಇಲ್ಲದ ಕಾರಣ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರ ಈ ಬಾರಿ ವಿಶೇಷ ಅನುದಾನ ನಿಗದಿ ಮಾಡಿ ಬೆಂಗಳೂರು ಮೂಲಸೌಕರ್ಯ ಅನುಷ್ಠಾನಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸದೆ ನಗರವನ್ನು ಕೇಂದ್ರವಾಗಿರಿಸಿಕೊಂಡು ಮುನ್ನಡೆಯಬೇಕಿದೆ ಎನ್ನುತ್ತಾರೆ ಜನಪ್ರತಿನಿಧಿಗಳು.
ಪ್ರತಿವರ್ಷ 20 ಸಾವಿರ ಕೋಟಿ ನೀಡಲಿ:
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂಬುದಾಗಿ ಅಧಿಕಾರಕ್ಕೇರಿದ ಎಲ್ಲ ಸರ್ಕಾರಗಳು ಹೇಳುತ್ತಲೇ ಬಂದಿವೆ. ಆದರೆ, ಬಜಟ್‌ನಲ್ಲಿ ಪ್ರಕಟಿಸಿದ ಯೋಜನೆಗಳು ಹಾಗೂ ಅನುದಾನ ಕಡತದಲ್ಲೇ ಉಳಿಯುತ್ತಿವೆ. ಹೀಗಾಗಿ ಅಭಿವೃದ್ಧಿ ಕಾರ್ಯಕ್ಕೆ ಸಾಲದತ್ತ ಮುಖ ಮಾಡಬೇಕಾದ ಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರತೀ ವರ್ಷ 20 ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದರೆ ಹಳಿ ತಪ್ಪಿರುವ ನಗರ ಅಭಿವೃದ್ಧಿಯನ್ನು ಸರಿ ಹಾದಿಗೆ ತರಬಹುದು ಎಂದು ಮಾಜಿ ಕಾರ್ಪೋರೇಟರ್‌ಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪರಿಸರಸ್ನೇಹಿ ಅಭಿವೃದ್ಧಿಗೆ ಒತ್ತು ಸಿಗಲಿ:
ಪ್ರಸ್ತುತ ನಗರದಲ್ಲಿ ಮೆಟ್ರೋ, ಡಬಲ್ ಡೆಕ್ಕರ್ ಕಾರಿಡಾರ್, ಉಪನಗರ ರೈಲು, ವರ್ತುಲ ರೈಲು ಯೋಜನೆ, ಎಸ್‌ಟಿಆರ್‌ಆರ್, ಪಿಆರ್‌ಆರ್ (ಬಿಬಿಸಿ), ಎಲಿವೇಟೆಡ್ ಕಾರಿಡಾರ್, ವೈಟ್ ಟಾಪಿಂಗ್, ಸುರಂಗ ರಸ್ತೆ ಪ್ರಾಜೆಕ್ಟ್‌ಗಳಿಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಲು ಸರ್ಕಾರ ಮುಂದಾಗಿದೆ. ಆದರೆ, ಬೃಹತ್ ಮಟ್ಟದ ಅಭಿವೃದ್ಧಿಯು ಪರಿಸರಕ್ಕೆ ಮಾರಕವಾಗುವಂತಿವೆ. ಇದರಿಂದ ಪರಿಸರ ಮಾಲಿನ್ಯ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಕಿರುಅರಣ್ಯ, ಪಾರ್ಕ್, ಕೆರೆಗಳ ಪುನಶ್ಚೇತನ, ಮಳೆನೀರುಗಾಲುವೆಗಳ ಪುನಶ್ಚೇತನ, ಜಲ ಸಂರಕ್ಷಣೆ ಸೇರಿ ಪರಿಸರಸ್ನೇಹಿ ಪ್ರಾಜೆಕ್ಟ್‌ಗಳು ಅನುಷ್ಠಾನಕ್ಕೆ ತಂದಲ್ಲಿ ಬೆಂಗಳೂರನ್ನು ವಾಸಯೋಗ್ಯ ನಗರವನ್ನಾಗಿಸಬಹುದು ಎನ್ನುತ್ತಾರೆ ಪರಿಸರಪ್ರಿಯರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ, ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿಲ್ಲ. ರಸ್ತೆ, ಚರಂಡಿ, ಉದ್ಯಾನ, ಕೆರೆಗಳ ಪುನಶ್ಚೇತನ ಸ್ಥಗಿತಗೊಂಡಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಶೂನ್ಯವಾಗಿದೆ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದ್ದ ಸರ್ಕಾರದ ಬ್ಯಾಡ್ ಬೆಂಗಳೂರು ಆಗಿ ಮಾರ್ಪಡಿಸಿದೆ. ಈಗಲೂ ಕಾಲ ಮುಂಚಿಲ್ಲ, ವಿಶೇಷ ಅನುದಾನ ನೀಡುವ ಮೂಲಕ ರಾಜಧಾನಿ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ.
- ಎಸ್.ಮುನಿರಾಜು, ದಾಸರಹಳ್ಳಿ ಶಾಸಕ