ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದು ಕಾಂಗ್ರೆಸ್ನಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಕ್ಕೆ ರೆಕ್ಕೆ -ಪುಕ್ಕ ಬಂದಿವೆ.
ಈ ಕುರಿತು ಚರ್ಚೆಗೆ ಸದ್ಯದಲ್ಲೇ ನಿಮ್ಮನ್ನು ದಿಲ್ಲಿಗೆ ಕರೆಯಿಸಿಕೊಳ್ಳುತ್ತೇವೆ ಎಂದು ಪಕ್ಷದ ವರಿಷ್ಠರು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸಿಎಂ, ಬೆಳಗಾವಿ ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆಯ ಉಮೇದಿನಲ್ಲಿದ್ದಾರೆ.
ಸಂಪುಟದಲ್ಲಿ ಖಾಲಿ ಉಳಿದ ಎರಡು ಸ್ಥಾನಗಳ ಭರ್ತಿ, ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ, ವಿಧಾನ ಪರಿಷತ್ಗೆ ಐವರ ನಾಮನಿರ್ದೇಶನ ಪಟ್ಟಿಗೆ ಹಿಡಿದ ಗ್ರಹಣ ಬಿಡಿಸಲು ಇಬ್ಬರೂ ಹಾಲಿ- ಮಾಜಿ ಸಿಎಂ ಇಬ್ಬರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಒಪ್ಪಿಗೆ ಪಡೆವ ಸಾಧ್ಯತೆ ಇದೆ.
ಈ ನಡುವೆ ಮುಂಬೈಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕೂಡ ವರಿಷ್ಠರ ಭೇಟಿಗೆ ಮುನ್ನ ದಿಲ್ಲಿಗೆ ಆಗಮಿಸಿ ಇವರಿಬ್ಬರನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಸ್ಐಆರ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಿಎಂ ನ.1 ರಂದು ದಿಲ್ಲಿಗೆ ತೆರಳಿದ್ದರಾದರೂ ಆಗ ಕರ್ನಾಟಕ ರಾಜ್ಯೋತ್ಸವದ ಕಾರಣ ಸಿಎಂ ದಿಲ್ಲಿ ವಿಮಾನ ಏರಿರಲಿಲ್ಲ.
ರಾಜ್ಯೋತ್ಸವ ಕಳೆದು ಸಿಎಂ ರಾಷ್ಟ್ರರಾಜಧಾನಿಗೆ ಹೋಗುವಷ್ಟರಲ್ಲಿ ಹರಿಪ್ರಸಾದ್, ಸಿದ್ದರಾಮಯ್ಯ ಇಬ್ಬರೂ ರಾಜ್ಯ ರಾಜಧಾನಿಗೆ ವಾಪಸಾಗಿದ್ದರು. ವಾರದ ಹಿಂದೆ ಸಿಎಂ ದಿಲ್ಲಿಗೆ ಹೋಗಿದ್ದರಾದರೂ ಅಲ್ಲಿ ಕಳೆದಿದ್ದು ಎರಡೇ ಗಂಟೆ !
ಹೀಗಾಗಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ, ಹಿರಿಯೂರು ಉಪ ಚುನಾವಣೆ, ವಿಧಾನ ಪರಿಷತ್ಗೆ ನಾಮನಿರ್ದೇಶನ ಕುರಿತು ವರಿಷ್ಠರ ಬಳಿ ಚರ್ಚೆಗೆ ಅವಕಾಶ ಲಭಿಸಿರಲಿಲ್ಲ. ಸಿಕ್ಕರೂ ಸಿದ್ದರಾಮಯ್ಯ, ಹರಿಪ್ರಸಾದ್ ಅವರಿಲ್ಲದೆ ಅಪೂರ್ಣ ಆಗುತ್ತಿತ್ತು.
ಇದೀಗ, ಸೋನಿಯಾ ಗಾಂಧಿ ಅವರ ಆತ್ಮಕಥೆಯ ಬಿಡುಗಡೆಗೆ ಹೊರಟಿರುವ ಹಾಲಿ-ಮಾಜಿ ಸಿಎಂ ಇಬ್ಬರಿಗೂ ಕಾರ್ಯಕ್ರಮದ ಬಳಿಕ ರಾಜ್ಯದ ವಿಷಯಗಳ ಚರ್ಚೆಗೆ ಸದವಕಾಶ ಸಿಗಲಿದೆ.
ಈ ನಡುವೆ ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೋಮವಾರ ದಿಲ್ಲಿಗೆ ಪ್ರಯಾಣಿಸುತ್ತಿದ್ದು ಸಂಪುಟ ವಿಸ್ತರಣೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಸಮಾಲೋಚಿಸುವ ಸುಳಿವು ನೀಡಿದ್ದಾರೆ.
ಮಹಿಳಾ ಸಚಿವರ ಆಯ್ಕೆ ಕುರಿತು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಈ ಪ್ರಕ್ರಿಯೆ ನಾಳೆ ಆಗುತ್ತದೆಯೋ- ಇಲ್ಲವೋ ಗೊತ್ತಿಲ್ಲ. ಈ ವಿಚಾರದ ಚರ್ಚೆಗೆ ನನ್ನನ್ನು ದೆಹಲಿಗೆ ಆಹ್ವಾನಿಸುತ್ತೇನೆ ಎಂದಿದ್ದರು. ಇದು ಆಗಬೇಕಾದ ಕೆಲಸ. ಖಂಡಿತ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಈ ಹಂತದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಅದು ಜೇನುಗೂಡಿಗೆ ಕಲ್ಲೆಸೆದಂತೆ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ನ ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕೆ ಎರಡು ಸ್ಥಾನಗಳು ಖಾಲಿ ಇವೆ. ಹೇಗೋ ಸಂಪುಟ ವಿಸ್ತರಣೆಯ ಬೆಂಕಿ ಆರಿದೆ. ಮೊದಲಿದ್ದ ತೀವ್ರತೆಯಂತೂ ಈಗಿಲ್ಲ. ಈ ಹಂತದಲ್ಲಿ ಖಾಲಿ ಉಳಿದ 2 ಸ್ಥಾನ ಭರ್ತಿ ಮಾಡಿದರೆ ಇಬ್ಬರ ಹೊರತಾಗಿ ಉಳಿದ ಎಲ್ಲ ಆಕಾಂಕ್ಷಿಗಳು ಕೆಂಡ ಕಾರಲಿದ್ದಾರೆ.
ಇದು ಮತ್ತೊಂದು ಹಂತದ ಭಿನ್ನಮತಕ್ಕೆ ದಾರಿಯಾಗಲಿದೆ.ಸಂಪುಟ ವಿಸ್ತರಣೆ ಮಾಡಲು ಹೋಗಿ ಭಿನ್ನಮತ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಸುಮ್ಮನಿರುವುದೇ ಉತ್ತಮ ಎಂದು ಅಭಿಪ್ರಾಯಪಡಲಾಗಿದೆ.