- ಎಸ್ಟಿಪಿಗಳ ಅಭಿವೃದ್ಧಿಪಡಿಸಲು ಬಿಡಬ್ಲ್ಯುಎಸ್ಎಸ್ಬಿ ಯೋಜನೆ
ಬೆಂಗಳೂರು: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 2,580 ದಶಲಕ್ಷ ಲೀಟರ್ (ಎಂಎಲ್ಡಿ) ಒಳಚರಂಡಿ ನೀರಿನಲ್ಲಿ ಪ್ರಸ್ತುತ ಶೇ.50 ಮಾತ್ರ ಸಂಸ್ಕರಣೆಯಾಗುತ್ತಿದ್ದು, 2029ರ ಡಿಸೆಂಬರ್ ವೇಳೆಗೆ ಪ್ರತಿಯೊಂದು ಹನಿ ತ್ಯಾಜ್ಯ ನೀರನ್ನೂ ಸಂಸ್ಕರಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ಈ ಹಿಂದೆ 2020, 2023 ಹಾಗೂ 2025ರ ಗಡುವು ನಿಗದಿಯಾಗಿದ್ದರೂ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಹಂತ ಹಂತವಾಗಿ ಕೊಳಚೆ ನೀರು ಸಂಸ್ಕರಣೆಯ ಹೊಸ ಘಟಕಗಳನ್ನು (ಎಸ್ಟಿಪಿ) ನಿರ್ಮಿಸುವ ಹಾಗೂ ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯ ಹೆಚ್ಚಿಸುವ ಯೋಜನೆ ರೂಪಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಕೆಎಸ್ಪಿಸಿಬಿ) ಏರ್ಪಡಿಸಿದ್ದ ಸಭೆಯಲ್ಲಿ ಜಲಮಂಡಳಿ ಸಲ್ಲಿಸಿದ ಅನುಷ್ಠಾನ ವರದಿ ಪರಿಶೀಲಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ, ಎಲ್ಲ ಉದ್ದೇಶಿತ ಎಸ್ಟಿಪಿಗಳನ್ನು 2029ರ ಡಿಸೆಂಬರ್ ಒಳಗೆ ನಿರ್ಮಿಸಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಸಂಸ್ಕರಣೆಯಾಗದ ನೀರು ಕಾವೇರಿ ನದಿಗೆ ಸೇರುವ ಕುರಿತು ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಗಡುವು ನಿಗದಿಪಡಿಸಿದೆ ಎಂದರು.
ಬೆಂಗಳೂರಿನ ತಂತ್ರಜ್ಞಾನ ಪಾರ್ಕ್, ಹೋಟೆಲ್, ಶಿಕ್ಷಣ ಸಂಸ್ಥೆ, ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳಲ್ಲಿರುವ ಖಾಸಗಿ ಎಸ್ಟಿಪಿಗಳನ್ನೂ ಪರಿಶೀಲಿಸಿ ರಾಷ್ಟ್ರೀಯ ಮಾನದಂಡ ಪಾಲನೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕೆಎಸ್ಪಿಸಿಬಿಗೆ ಸೂಚಿಸಲಾಗಿದೆ. ಎಸ್ಟಿಪಿಗಳ ಕಾರ್ಯನಿರ್ವಹಣೆ ಹಾಗೂ ಸಂಸ್ಕರಿತ ನೀರಿನ ಗುಣಮಟ್ಟವನ್ನು ನೈಜ ಸಮಯದಲ್ಲಿ ತೋರಿಸುವ ಕೇಂದ್ರೀಕೃತ ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸುವಂತೆಯೂ ಸಚಿವರು ನಿರ್ದೇಶಿಸಿದರು.
ಜಲಮಂಡಳಿ ನಿರ್ವಹಣೆಯ ಕೆಲವು ಎಸ್ಟಿಪಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹಾಗೂ ಕೆಎಸ್ಪಿಸಿಬಿ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸದಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟಕಗಳಲ್ಲಿನ ಲೋಪಗಳನ್ನು 30 ದಿನದೊಳಗೆ ಸರಿಪಡಿಸಿ ಮಾನದಂಡಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚಿಸಿದೆ.