ಡಾ.ಎನ್. ಮಂಜುಳಾ ಐಎಎಸ್ 
ಬೆಂಗಳೂರು

ಜಲಮಂಡಳಿ ನೌಕರರ ವಿಶೇಷ ಭತ್ಯೆ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಡಾ. ಎನ್​. ಮಂಜುಳಾ ಭರವಸೆ

ಬೆಂಗಳೂರು: ನಗರದ ಹೊರವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು ಜಲಮಂಡಳಿ ನೌಕರರ ವಿಶೇಷ ಸ್ಥಳಿಯ ಭತ್ಯೆ ಪರಿಷ್ಕರಣೆ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಎನ್​. ಮಂಜುಳಾ ಭರವಸೆ ನೀಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಹಾಗೂ ನೈರ್ಮಲ್ಯ ಕಾರ್ಮಿಕರ ಸಂಘದ ವತಿಯಿಂದ ಜಲಮಂಡಳಿ ಕಚೇರಿಯಲ್ಲಿ ಆಯೋಜಿಸಿದ್ದ ವೇತನ ಪರಿಷ್ಕರಣೆ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಬಳ ಹೆಚ್ಚಳದೊಂದಿಗೆ ನೌಕರರ ಜವಾಬ್ದಾರಿಯೂ ಹೆಚ್ಚಾಗುತ್ತದೆ. ದೇಶದ ಅತ್ಯುತ್ತಮ ನೀರು ಸರಬರಾಜು ಸಂಸ್ಥೆಗಳಲ್ಲಿ ಒಂದಾದ ಜಲಮಂಡಳಿಯ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ನೌಕರರ ಮೇಲಿದೆ ಎಂದು ಅವರು ಹೇಳಿದರು.
ನೌಕರರ ಪರಿಶ್ರಮ ಮತ್ತು ಬದ್ಧತೆಯಿಂದ ಜಲಮಂಡಳಿ ಇಂದು ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಇದೇ ಸಮರ್ಪಣಾ ಮನೋಭಾವದೊಂದಿಗೆ, ಸ್ವಂತ ಸಂಸ್ಥೆ ಎಂಬ ಭಾವನೆಯಿಂದ ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಲಮಂಡಳಿಯ ನೂತನ ಮುಖ್ಯ ಆಡಳಿತಾಧಿಕಾರಿ ಪ್ರಸನ್ನಕುಮಾರ್​, ಆರ್ಥಿಕ ಸಲಹೆಗಾರ ಸುಬ್ಬರಾಮಯ್ಯ, ಪ್ರಧಾನ ಮುಖ್ಯ ಅಭಿಯಂತರ ದಲಾಯತ್​, ಸಿಬ್ಬಂದಿ ನಿರ್ವಹಣಾಧಿಕಾರಿ ಎಂ.ಆರ್​. ಸಂತೋಷ್​, ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಸ್ಯಾನಿಟರಿ ವರ್ಕರ್ಸ್​ ಯೂನಿಯನ್​ ಅಧ್ಯಕ್ಷ ಸಿದ್ದಪ್ಪ ಹಾಜರಿದ್ದರು.