- ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿಕೆ
- ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲವೆಂದು ಸ್ಪಷ್ಟನೆ
ಬೆಂಗಳೂರು: ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳ ಪ್ರಯಾಣದ ದರವನ್ನು ಹೆಚ್ಚಿಸುವ ಸಂಬಂಧ ಸಾರಿಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ಹೆಬ್ಬಾಳದಲ್ಲಿ ಟನಲ್ ರಸ್ತೆ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಮುನ್ನದಿನ ಶನಿವಾರ ಸ್ಥಳಪರಿಶೀಲನೆ ನಡೆಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಸ್ ಪ್ರಯಾಣ ದರ ಹೆಚ್ಚಿಸುವ ವಿಚಾರದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಈ ವಿಚಾರವಾಗಿ ಊಹಾಪೋಹದ ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಿದರು.
ಕೊಲ್ಲಿ ಯುದ್ಧದಿಂದಾಗಿ ತೈಲ ಬೆಲೆ ಹೆಚ್ಚಳದಿಂದ ಡೀಸೆಲ್ ದರ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾರಿಗೆ ಸಂಸ್ಥೆಗಳು ಈ ದರ ವ್ಯತ್ಯಾಸವನ್ನು ಸರಿದೂಗಿಸಿಕೊಂಡು ಸೇವೆ ನೀಡುವಲ್ಲಿ ನಿರತವಾಗಿವೆ. ಡೀಸೆಲ್ ದರ ಹೆಚ್ಚಳದಿಂದ ಸಾರಿಗೆ ಸಂಸ್ಥೆಗಳು ಅಂದಾಜು 5 ಸಾವಿರ ಕೋಟಿ ರೂ. ನಷ್ಟ ಹೊಂದಿವೆ. ಇದನ್ನಾಧರಿಸಿ ಪ್ರಯಾಣಿಕರ ಟಿಕೆಟ್ ದರ ಏರಿಸುವಂತೆ ಸಲಹೆ ಬಂದಿವೆ. ಆದರೆ, ಈ ವಿಷಯವನ್ನು ಸಂಪುಟದಲ್ಲಿ ವಿವರವಾಗಿ ಚರ್ಚಿಸಿದ ನಂತರವೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಸಚಿವರು ಪ್ರತಿಪಾದಿಸಿದರು.