bowring-institute 
ಬೆಂಗಳೂರು

ಬೌರಿಂಗ್ ಇನ್‌ಸ್ಟಿಟ್ಯೂಟ್ ಸೂಪರ್‌ಸೀಡ್‌ಗೆ ಆಗ್ರಹ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದಾಗಿ ಸಿಎಂಗೆ ಪತ್ರ
  • ಕಾನೂನು ಕ್ರಮಕ್ಕೆ ಒತ್ತಾಯಿಸಿ ಇ.ಡಿ., ಲೋಕಾಯುಕ್ತಕ್ಕೆ ದೂರು
  • ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆ ಬಿಡುಗಡೆ
ಬೆಂಗಳೂರು: ಮಹಾನಗರದ ಪ್ರಮುಖ ಸಾರ್ವಜನಿಕ ಕ್ಲಬ್‌ಗಳಲ್ಲಿ ಒಂದೆನಿಸಿರುವ ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಲವು ಅಕ್ರಮ, ಅವ್ಯವಹಾರ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಮೊತ್ತ ನಷ್ಟ ಉಂಟುಮಾಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ತಕ್ಷಣವೇ ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
1956ರಲ್ಲಿ ಸಂಸ್ಥೆಗೆ ಜಾಗವನ್ನು ಸಿಟಿ ಕಾರ್ಪೋರೇಷನ್‌ನಿಂದ ಗುತ್ತಿಗೆ ವಹಿಸಿದ ವೇಳೆ ಮುಕ್ತ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಷರತ್ತು ವಿಧಿಸಿತ್ತು. ಆದರೀಗ 4 ಮಹಡಿಗಳ ಬೃಹತ್ ಕಟ್ಟಡವೂ ಸೇರಿ ಹಾಲಿ ಬಿಲ್ಡಿಂಗ್‌ಗಳಲ್ಲಿ ಹೆಚ್ಚುವರಿ ಮಹಡಿ ನಿರ್ಮಾಣವನ್ನು 90 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನಕ್ಷೆ ಮಂಜೂರಾತಿಗೆ ಅವಕಾಶ ಇಲ್ಲದಿದ್ದರೂ, ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳು ಕಾನೂಬಾಹಿರವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಕೃತ್ಯದಲ್ಲಿ ಷಾಮೀಲಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಪಾವತಿಸದೆ ವಂಚನೆ:

ಬೌರಿಂಗ್ ಸಂಸ್ಥೆಯಲ್ಲಿ 2021-22ರಿಂದ ಈವರೆಗೆ 2,000 ಹೊಸ ಸದಸ್ಯರನ್ನು ತಲಾ 20 ಲಕ್ಷ ರೂ. ಶುಲ್ಕ ಪಡೆದು ಸದಸ್ಯತ್ವ ನೀಡಲಾಗಿದೆ. ಶುಲ್ಕಕ್ಕೆ ಶೇ.18 ಜಿಎಸ್‌ಟಿಯಂತೆ ತಲಾ 3.6 ಲಕ್ಷ ರೂ.ನಂತೆ ಒಟ್ಟು 54 ಕೋಟಿ ರೂ. ಸ್ವೀಕರಿಸಿದ್ದರೂ, ಈವರೆಗೂ ಆ ಹಣವನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸಿಲ್ಲ. ಈ ವಂಚನೆಯನ್ನು ಆರ್ಥಿಕ ಅಪರಾಧ ಎಂದು ಪರಿಗಣಿಸಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಇದೇ ವಿಚಾರವಾಗಿ ಹಿಂದೆಯೇ ಪ್ರಧಾನಮಂತ್ರಿ ಕಚೇರಿಗೂ ದೂರು ಸಲ್ಲಿಸಿದ್ದು, ಇದನ್ನಾಧರಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ರವಾನೆಯಾಗಿದೆ ಎಂದು ರಮೇಶ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಬೌರಿಂಗ್ ಸಂಸ್ಥೆಯಲ್ಲಿ ನಡೆದಿರುವ ಹಲವು ಅಕ್ರಮ, ಅವ್ಯವಹಾರದ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಇ.ಡಿ. ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಿ ತನಿಖೆಗೆ ಮನವಿ ಮಾಡಲಾಗಿದೆ. ಜತೆಗೆ ಸಾರ್ವಜನಿಕ ಸ್ವತ್ತು ಹಾಗೂ ನಾಗರಿಕರ ಕೋಟ್ಯಂತರ ರೂ. ಹಣವನ್ನು ದುರ್ಬಳಕೆ ಆಗಿರುವ ಕಾರಣ ಸಿಐಡಿ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಿಎಂ ಅವರಲ್ಲಿ ಕೋರಲಾಗಿದೆ ಎಂದು ರಮೇಶ್ ವಿವರಿಸಿದರು.

ಕೃಷಿ ಭೂಮಿ ಖರೀದಿಯಲ್ಲೂ ಅಕ್ರಮ:

ಬೌರಿಂಗ್ ಇನ್‌ಸ್ಟಿಟ್ಯೂಟ್ ಇತ್ತೀಚಿಗೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದಲ್ಲಿ 24 ಎಕರೆ ಕೃಷಿ ಜಮೀನನ್ನು ಕ್ರಯಕ್ಕೆ ಖರೀದಿಸಿದೆ. ಖರೀದಿ ವೇಳೆ ಅಲ್ಲಿ ಪ್ರತಿ ಎಕರೆಗೆ 70 ಲಕ್ಷ ರೂ. ಸರ್ಕಾರಿ ಸೂಚ್ಯಂಕ ದರ ಇದ್ದರೂ, ತಲಾ 3.69 ಕೋಟಿ ರೂ.ನಂತೆ ಬೃಹತ್ ಮೊತ್ತವನ್ನು ನೀಡಿ ಕ್ರಯಕ್ಕೆ ಪಡೆಯಲಾಗಿದೆ. ಇದರಿಂದ ಒಟ್ಟು 67 ಕೋಟಿ ರೂ. ವ್ಯಯಿಸಿದೆ. ಇದಕ್ಕೆ ಸದಸ್ಯರ ವಿರೋಧ ಇದ್ದರೂ, ಸಂಸ್ಥೆಗೆ ನಷ್ಟವುಂಟು ಮಾಡಲಾಗಿದೆ. ಜತೆಗೆ ಕ್ಲಬ್ ಕೃಷಿ ಜಮೀನು ಖರೀದಿಸುವಾಗ ಸರ್ಕಾರದ ಅನುಮತಿಯನ್ನು ಪಡೆದಿಲ್ಲ ಎಂದು ಎನ್.ಆರ್. ರಮೇಶ್ ದೂರಿದರು.