KPSC 
ಬೆಂಗಳೂರು

ಕೆಪಿಎಸ್‌ಸಿ ಕಳಂಕ ತೊಳೆಯಲು ದಿಟ್ಟಹೆಜ್ಜೆ

ಸದನ ಸಮಿತಿ ವರದಿ ಸಿದ್ಧ, ಶೀಘ್ರವೇ ಸರ್ಕಾರಕ್ಕೆ ಶಿಫಾರಸು, ಅಕ್ರಮ ತಡೆ, ಪಾರದರ್ಶಕತೆ, ಕಳಂಕಕ್ಕೆ ಮುಕ್ತಿ ನೀಡುವುದೇ ಧ್ಯೇಯ

ಬೆಂಗಳೂರು: ಕರ್ನಾಟಕ ಲೋಕಾಸೇವಾ ಆಯೋಗಕ್ಕೆ(ಕೆಪಿಎಸ್‌ಸಿ) ಮೂಗುದಾರ ತೊಡಿಸಿ, ಮೆತ್ತಿರುವ ಕಳಂಕ ತೊಳೆದು ಸರಿದಾರಿಗೆ ತರುವ ಕ್ಷಣಗಳು ಕೊನೆಗೂ ಸನಿಹವಾಗುತ್ತಿದೆ ಎಂಬಂತೆ ಕಾಣುತ್ತಿದೆ.

ಕೆಪಿಎಸ್‌ಸಿ ವಿಶ್ವಾಸಾರ್ಹತೆಯನ್ನು ಮರುಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ವಿಧಾನಮಂಡಲದಲ್ಲಿ ರಚನೆಯಾಗಿದ್ದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ಸದನ ಸಮಿತಿ ವರದಿ ಸಿದ್ಧಪಡಿಸುವಲ್ಲಿ ಅಂತಿಮ ಘಟ್ಟ ತಲುಪಿದೆ. ಒಂದೆರೆಡು ಸಭೆಯಲ್ಲಿ ಪೂರ್ಣ ಸಮಿತಿ ಸದಸ್ಯರ ಒಮ್ಮತ ಪಡೆದು ಸರ್ಕಾರಕ್ಕೆ ಕೆಪಿಎಸ್‌ಸಿ ಸುಧಾರಣೆಗೆ ಶಿಫಾರಸು ಮಾಡಲು ಸಜ್ಜಾಗಿದೆ.

ಆಯೋಗದ ವಿಶ್ವಾಸಾರ್ಹತೆಯನ್ನು ಮರಳಿ ತರುವುದು, ಇಡೀ ವ್ಯವಸ್ಥೆಯಲ್ಲಿ ಯುಪಿಎಸ್‌ಸಿ ಮಾದರಿ ಶಿಸ್ತನ್ನು ಅಳವಡಿಸುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತಂದು ವಿಳಂಬ ನೀತಿಗೆ ಶಾಶ್ವತ ಇತಿಶ್ರೀ ಹಾಡುವುದರ ಬಗ್ಗೆ ಸಮಿತಿ ಶಿಫಾರಸು ಮಾಡಲಿದೆ.

ಮೇ 11ಕ್ಕೆ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಮೊದಲ ಸಭೆ ನಡೆಸಿದ್ದ ಸಮಿತಿ, ಆ ಬಳಿಕ ಪ್ರತಿ ಮಂಗಳವಾರ ಸಭೆ ನಡೆಸಿದೆ. ರಾಜ್ಯ ನೇಮಕಾತಿ ಮತ್ತು ಪರೀಕ್ಷಾ ಪ್ರಾಧಿಕಾರಗಳಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ), ರಾಜೀವ್ ಗಾಂಧಿ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿ ವಿವಿಧ ಪ್ರಾಧಿಕಾರದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯಲು ಅವರವರು ಕೈಗೊಂಡಿರುವ ತಾಂತ್ರಿಕ ಕ್ರಮಗಳು ಮತ್ತು ಸುಧಾರಣೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದಾದ ಮೇಲೆ ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷರು, ಸದಸ್ಯರು ಮತ್ತು ಆಯುಕ್ತರನ್ನು ಆಹ್ವಾನಿಸಿ ಅವರ ಕಾಲಾವಧಿಯಲ್ಲಿ ಕೈಗೊಳ್ಳಲಾದ ಸುಧಾರಣ ಕ್ರಮಗಳು ಹಾಗೂ ಪ್ರಸ್ತುತ ಅಳವಡಿಸಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದರ ಜತೆಗೆ ಸರ್ಕಾರದ ಹಾಲಿ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಈ ಸಭೆಗೆ ಕರೆಯುತ್ತಿರುವುದು ಸುಧಾರಣೆ ಹಾದಿಯಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಅಧಿಕಾರಿಗಳೊಂದಿಗೆ ನೇರ ಸಮಾಲೋಚನೆ ನಡೆಸಿ, ಪ್ರಸ್ತುತ ಇರುವ ಆಡಳಿತಾತ್ಮಕ ತೊಡಕುಗಳನ್ನು ಚರ್ಚೆ ನಡೆಸಿದೆ.

ಪ್ರಮುಖವಾಗಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ಕೆಪಿಎಸ್‌ಸಿ ಕಾರ್ಯ ಚಟುವಟಿಕೆಗಳ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಅಂತಿಮವಾಗಿ ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯನ್ನು ನಡೆಸುವುದರ ಬಗ್ಗೆ ಸದಸ್ಯರು ಗಂಭೀರವಾದ ಚರ್ಚೆಗಳನ್ನು ನಡೆಸಿದ್ದಾರೆ.

ಅನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಾಧಿಕಾರಗಳ ಬಗ್ಗೆಯೂ ವರದಿಯನ್ನು ತರಿಸಿಕೊಂಡು ಅದರಲ್ಲಿನ ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ.

ಕೊನೆಗೆ ಕೆಪಿಎಸ್ಸಿ ಸದಸ್ಯರ ಕುರಿತಂತೆಯೇ ಪ್ರಮುಖವಾಗಿ ವಿಚಾರ ವಿನಿಮಯವಾಗಿದೆ. ಕೆಪಿಎಸ್ಸಿ ಸರಿಯಾಗಬೇಕೆಂದರೆ ಏನೆಲ್ಲ ಬದಲಾವಣೆ ಆಗಬೇಕೆಂಬ ಚರ್ಚೆ ನಡೆವಾಗ ಅಧ್ಯಕ್ಷರ ಆಯ್ಕೆ, ಸದಸ್ಯರ ನೇಮಕ ಮತ್ತು ಕಂಟ್ರೋಲರ್ ಹುದ್ದೆಗೆ ಹೊಣೆಗಾರಿಕೆ ನಿಗದಿ ಮಾಡುವ ಅಂಶ ಪ್ರಧಾನವಾಗಿ ಪ್ರಸ್ತಾಪವಾಗಿದೆ.

ಕರಡು ಪ್ರತಿಗೆ ಅಂತಿಮ ಸ್ಪರ್ಶ ಸದನ ಸಮಿತಿ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಕರಡು ಪ್ರತಿಯನ್ನು ಸಿದ್ಧಪಡಿಸುವ ಸಂಬಂಧ ಅಂತಿಮ ಸಭೆಗಳನ್ನು ನಡೆಸಿ ಸದಸ್ಯರ ಒಪ್ಪಿಗೆ ಪಡೆಯಬೇಕಿದೆ. ಕೆಲವೊಬ್ಬರು ಮತ್ತಷ್ಟು ಸುಧಾರಣಾ ಕ್ರಮಗಳನ್ನು ಸೇರಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿರುವ ಕಾರಣಕ್ಕೆ ಕರಡು ಪ್ರತಿ ಸಿದ್ಧತೆಗೆ ಅಲ್ಪ ವಿಳಂಬ ಆಗಿದ್ದು, ಸರ್ಕಾರಕ್ಕೆ ಶೀಘ್ರವೇ ಸಲ್ಲಿಕೆಯಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕೆಪಿಎಸ್‌ಸಿ ಸುಧಾರಣೆಗೆ ಸಾಕಷ್ಟು ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಲೋಪದೋಷ ಸರಿಪಡಿಸಿ ವಿಶ್ವಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿ ವರದಿ ಸಲ್ಲಿಸಲಿದೆ.
ಆರ್.ವಿ. ದೇಶಪಾಂಡೆ-ಹಿರಿಯ ಶಾಸಕ