ವಿಧಾನಸೌಧದಲ್ಲಿ ನಡೆದ ನಮ್ಮ ಬಿಎಂಟಿಸಿ 2.0 ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಯು.ಟಿ. ಖಾದರ್, ಕೆ.ಎಚ್. ಮುನಿಯಪ್ಪ ಮತ್ತಿತರರು ಇದ್ದರು.
- ನೂತನ ಸೌಲಭ್ಯಕ್ಕೆ ಸಿಎಂ ಚಾಲನೆ
- ಒಂದೇ ಆ್ಯಪ್ನಲ್ಲಿ ನಾಲ್ಕೂ ಸಾರಿಗೆ ಸಂಸ್ಥೆ!
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ "ಒಂದು ಕರ್ನಾಟಕ ಮೊಬಿಲಿಟಿ ಆ್ಯಪ್' ಹಾಗೂ ವಾಟ್ಸ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೌಲಭ್ಯಕ್ಕೆ ಚಾಲನೆ ದೊರೆತಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಸರ್ಕಾರದ 100 ದಿನಗಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೀಕೃತ ಮೊಬೈಲ್ ಆ್ಯಪ್ ಮತ್ತು ವಾಟ್ಸ್ ಆ್ಯಪ್ ಟಿಕೆಟಿಂಗ್ ವ್ಯವಸ್ಥೆ ಲೋಕಾರ್ಪಣೆಗೊಳಿಸಿದರು.
ಆ್ಯಪ್ನಲ್ಲಿ ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಬಿಎಂಟಿಸಿ ಸೇವೆಗಳನ್ನು ಒಗ್ಗೂಡಿಸಲಾಗಿದೆ. ಸುರಕ್ಷಿತ ಲಾಗಿನ್, ಟಿಕೆಟ್ ಕಾಯ್ದಿರಿಸುವಿಕೆ ವಿವರ, ವಹಿವಾಟು ನಿರ್ವಹಣೆ ಹಾಗೂ ನಾಲ್ಕೂ ಸಂಸ್ಥೆಗಳಿಗೆ ಸಂಬಂಧಿಸಿದ ದೂರು ದಾಖಲಿಸಿ, ಅದರ ಸ್ಥಿತಿಗತಿ ಪರಿಶೀಲಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಆನ್ಲೈನ್ ಮೂಲಕ ಮಾಸಿಕ ಬಸ್ಪಾಸ್ ಪಡೆಯುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದ್ದು, ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೆ ಅವಕಾಶ ನೀಡಲಾಗುತ್ತದೆ.
ವಾಟ್ಸ್ ಆ್ಯಪ್ನಲ್ಲೇ ಟಿಕೆಟ್: ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಬಸ್ಗಳ ಟಿಕೆಟ್ಗಳನ್ನು ವಾಟ್ಸ್ ಆ್ಯಪ್ ಮೂಲಕವೂ ಕಾಯ್ದಿರಿಸಬಹುದು. ಇದಕ್ಕಾಗಿ ವಾಟ್ಸಾಪ್ ಸಂಖ್ಯೆ +91 6364940880ಕ್ಕೆ ಸಂದೇಶ ಕಳುಹಿಸಬೇಕು. ಬಳಿಕ ವಾಟ್ಸ್ ಆ್ಯಪ್ನಲ್ಲೇ ಪ್ರಯಾಣದ ಸ್ಥಳ, ತಲುಪುವ ಸ್ಥಳ, ದಿನಾಂಕ ಹಾಗೂ ಬಸ್ ಆಯ್ಕೆ ಮಾಡಿ ಪ್ರಯಾಣಿಕರ ವಿವರ ದಾಖಲಿಸಿ ಪಾವತಿ ಪೂರ್ಣಗೊಳಿಸಬಹುದು.
ಬಿಎಂಟಿಸಿ-ಮೆಟ್ರೋ ಟಿಕೆಟ್ಗೂ ಆ್ಯಪ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಭಿವೃದ್ಧಿಪಡಿಸಿರುವ "ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0'ಗೆ ಚಾಲನೆ ನೀಡಲಾಗಿದೆ. ಆ್ಯಪ್ನಲ್ಲಿ ಬಿಎಂಟಿಸಿ ಬಸ್ಗಳ ನೇರ ಸ್ಥಳ ಮಾಹಿತಿ, ಆಗಮನದ ಅಂದಾಜು ಸಮಯ, ಸಮೀಪದ ಬಸ್ ನಿಲ್ದಾಣಗಳ ವಿವರ, ಡಿಜಿಟಲ್ ಟಿಕೆಟ್, ಬಸ್ ಪಾಸ್ಗಳ ಖರೀದಿ, ಪ್ರಯಾಣ ಯೋಜನೆ ಹಾಗೂ ಯುಪಿಐ ಸೇರಿ ಡಿಜಿಟಲ್ ಪಾವತಿ ಸೌಲಭ್ಯ ಕಲ್ಪಿಸಲಾಗಿದೆ. ಮುಖ್ಯವಾಗಿ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಪ್ರಯಾಣಕ್ಕೆ ಒಂದೇ ಆ್ಯಪ್ನಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (ಎನ್ಸಿಎಂಸಿ) ಮೂಲಕವೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಪರ್ಕಿಸುವ ಮೂಲಕ ಬೆಂಗಳೂರಿನ ಪ್ರಯಾಣ ವ್ಯವಸ್ಥೆಗೆ ಮತ್ತಷ್ಟು ವೇಗ ಸಿಗಲಿದೆ.