ಬಿಎಂಟಿಸಿ 
ಬೆಂಗಳೂರು

ರಾಜಧಾನಿ ರಸ್ತೆಗೆ ಸದ್ಯವೇ ಇನ್ನಷ್ಟು ಇವಿ ಬಸ್​!

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಬಿಎಂಟಿಸಿಗೆ 4,500 ಎಲೆಕ್ಟ್ರಿಕ್​ ಬಸ್​
  • ಹಂತ ಹಂತವಾಗಿ ಸೇವೆಗೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಶೀಘ್ರದಲ್ಲೇ ಮತ್ತಷ್ಟು ವಿದ್ಯುತ್​ ಚಾಲಿತ ಬಸ್​ಗಳು ಸೇರ್ಪಡೆಯಾಗಲಿವೆ. ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ)ಗೆ 4,500 ಎಲೆಕ್ಟ್ರಿಕ್​ ಬಸ್​ಗಳನ್ನು ಪಡೆಯಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹಂತ ಹಂತವಾಗಿ ಇವುಗಳು ರಸ್ತೆಗಿಳಿಯಲಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್​ ತಿಳಿಸಿದ್ದಾರೆ. 
ಕೇಂದ್ರ ಸರ್ಕಾರದ ಪಿಎಂ ಇ-&ಡೆವ್​ ಯೋಜನೆಯಡಿ ಬಸ್​ಗಳನ್ನು ಪಡೆಯಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ ಸುಮಾರು 600 ಕೋಟಿ ರೂ. ವೆಚ್ಚ ಮಾಡಲಿದೆ. 20 ವರ್ಷಗಳಲ್ಲಿ ಸುಮಾರು 12 ಸಾವಿರ ಕೋಟಿ ರೂ. ರ್ಖಚಾಗುವ ನಿರೀಕ್ಷೆಯಿದೆ.
ಒಟ್ಟು 4,500 ಬಸ್​ಗಳ ಪೈಕಿ 3,800 ಬಸ್​ಗಳು 12 ಮೀಟರ್​ ಉದ್ದದ್ದಾಗಿದ್ದರೆ, 900 ಬಸ್​ಗಳು 9 ಮೀಟರ್​ ಉದ್ದವಿರಲಿವೆ. ಇದರಲ್ಲಿ 400 ಬಸ್​ಗಳು ಹವಾನಿಯಂತ್ರಿತವಾಗಿರಲಿವೆ. ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿ ಬಸ್​ಗಳನ್ನು ಪೂರೈಸಲಿದ್ದು, ಲಭ್ಯತೆಗೆ ಅನುಗುಣವಾಗಿ ಪ್ರಯಾಣಿಕರ ಸೇವೆಗೆ ನಿಯೋಜಿಸಲಾಗುತ್ತದೆ.
ಎಲೆಕ್ಟ್ರಿಕ್​ ಬಸ್​ಗಳ ಹೆಚ್ಚಳದಿಂದ ನಗರದ ವಾಯುಮಾಲಿನ್ಯ ತಗ್ಗಿಸುವ ಜತೆಗೆ ಪರಿಸರ ಸಂರಕ್ಷಣೆಗೆ ಉತ್ತೇಜನ ದೊರೆಯಲಿದೆ. ಕೇಂದ್ರದ ಯೋಜನೆಯಡಿ ಬಸ್​ಗಳ ಕಾರ್ಯಾಚರಣೆಗೆ ಪ್ರತಿ ಕಿ.ಮೀ. ಆಧಾರದಲ್ಲಿ ಬಿಎಂಟಿಸಿ ಪಾವತಿ ಮಾಡಲಿದೆ.
ಡಿಪೋ, ನಿಲ್ದಾಣಗಳಿಗೆ ಕಾಯಕಲ್ಪ:
ಬಸ್​ ಡಿಪೋಗಳ ನಿಮಾರ್ಣ ಹಾಗೂ ಹಳೆಯ ಬಸ್​ ನಿಲ್ದಾಣಗಳ ಉನ್ನತಿಕರಣಕ್ಕಾಗಿ ಕೇಂದ್ರದಿಂದ 2 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಮೊದಲ ಹಂತದಲ್ಲಿ ಉಚಿತ ಸ್ಮಾರ್ಟ್​ ಕಾರ್ಡ್​ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 250 ಕೋಟಿ ರೂ. ವೆಚ್ಚವಾಗಲಿದ್ದು, ಶೀಘ್ರವೇ ಪ್ರಕ್ರಿಯೆ ಆರಂಭವಾಗಲಿದೆ.
ಪ್ರಯಾಣ ದರ ಏರಿಕೆ?
ತೈಲೋತ್ಪನ್ನ ದರ ಏರಿಕೆ ನಡುವೆಯೂ ಕಳೆದ ಎಂಟು ತಿಂಗಳಿಂದ ಬಸ್​ ಪ್ರಯಾಣ ದರ ಹೆಚ್ಚಿಸಿಲ್ಲ. ನಾಲ್ಕು ಸಾರಿಗೆ ನಿಗಮಗಳ ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಕುರಿತು ಅತುಲ್​ ತಿವಾರಿ ನೇತೃತ್ವದ ಸಮಿತಿ ಅಧ್ಯಯನ ನಡೆಸುತ್ತಿದೆ. ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ಸ್ವಲ್ಪ ಪ್ರಮಾಣದಲ್ಲಿ ದರ ಪರಿಷ್ಕರಿಸುವ ಚಿಂತನೆ ಇದೆ.