ಬಿಎಂಟಿಸಿ 
ಬೆಂಗಳೂರು

ಚಿಲ್ಲರೆ ಕಾರಣವೊಡ್ಡಿ ಪ್ರಯಾಣಿಕರ ಶೋಷಣೆ ಸಲ್ಲದು

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಎಲ್ಲ ಸಾರಿಗೆ ನಿಗಮಗಳ ನಿರ್ವಾಹಕರಿಗೆ ಸಾರಿಗೆ ಸಚಿವರ ಸೂಚನೆ
ಬೆಂಗಳೂರು: ಪ್ರಯಾಣ ವೇಳೆ ಟಿಕೆಟ್​ಗಾಗಿ ಚಿಲ್ಲರೆ ಹಣ ಕೊಡದಿರುವ ವಿಚಾರದಲ್ಲಿ ಪ್ರಯಾಣಿಕರನ್ನು ಶೋಷಣೆ ಮಾಡಬಾರದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್​ ಬಿಎಂಟಿಸಿ ಸೇರಿ ಎಲ್ಲ ಸಾರಿಗೆ ನಿಗಮಗಳ ನಿರ್ವಾಹಕರು ಮತ್ತು ಚಾಲಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಕೆಳಗಿಳಿಸುವ ನಿರ್ವಾಹಕರ ಧೋರಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಲ್ಲದೆ, ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನನಗೂ ಇಂತಹ ಅನುಭವ ಆಗಿದೆ. ಚಿಲ್ಲರೆ ಇಲ್ಲವೆಂದು ನೆಪವೊಡ್ಡಿ ಪ್ರಯಾಣಿಕರನ್ನು ಅರ್ಧದಾರಿಯಲ್ಲಿ ಇಳಿಸುವುದು ಅಮಾನವೀಯ ಎಂದಿದ್ದಾರೆ.
"ಶಕ್ತಿ' ಯೋಜನೆಯಡಿ ಪ್ರಯಾಣಿಸುವ ಮಹಿಳೆಯರು ಮತ್ತು ಇತರ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾರ ಮೇಲೆಯೂ ದುರ್ವರ್ತನೆ ತೋರಬಾರದು. ಹಾಗೊಂದು ವೇಳೆ ದೂರುಗಳ ಬಂದರೆ ಆಯಾ ನಿರ್ವಾಹಕರು& ಚಾಲಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಮಾನತು ವಾಪಸ್​ಗೆ ಸೂಚನೆ: ಜು.11 ರಾತ್ರಿ ಸಾರಿಗೆ ಸಚಿವರು ಮುಖಗವಸು ಹಾಕಿಕೊಂಡು ದಿಢೀರನೆ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಿದ್ದರು,  ಕೆಂಪೇಗೌಡ ಬಸ್​ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ತೆರಳುತ್ತಿದ್ದ ಬಸ್​ನಲ್ಲಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಎಂಬುವರು ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಸಚಿವರನ್ನು ಬಸ್​ನಿಂದ ಕೆಳಗೆ ಇಳಿಸಿದ್ದರು. ಈ ಹಿನ್ನೆಲೆ ಬಿಎಂಟಿಸಿ ಸಂಸ್ಥೆಯು ರಾಮಕೃಷ್ಣ ಅವರನ್ನು ಅಮಾನತುಗೊಳಿಸಿತ್ತು. ಬುಧವಾರ ರಾಮಕೃಷ್ಣ ಅವರು ಸಚಿವರನ್ನು ಭೇಟಿಯಾಗಿ ತಮ್ಮ ತಪ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು, ಇನ್ನೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿ, ಅಮಾನತು ರದ್ದುಪಡಿಸಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.