ಬಿಎಂಟಿಸಿ 
ಬೆಂಗಳೂರು

ಬಿಎಂಟಿಸಿಯ 165 ಎಕರೆ ಜಾಗದ ಒತ್ತುವರಿ ತೆರವು

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • 2 ವರ್ಷಗಳಲ್ಲಿ 10 ಪ್ರಕರಣ ದಾಖಲು
  • 40 ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಸೇರಿದ ಜಾಗದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವಲ್ಲಿ ವಿಶೇಷ ಕಾರ್ಯಾಚರಣೆ ನಡೆದಿದೆ. ಎರಡು ವರ್ಷಗಳಲ್ಲಿ ವಿವಿಧೆಡೆ ಒತ್ತುವರಿಯಾಗಿದ್ದ 165 ಎಕರೆ ಜಾಗವನ್ನು ತೆರವುಗೊಳಿಸಿ ಸಂಸ್ಥೆಯ ವಶಕ್ಕೆ ಪಡೆಯಲಾಗಿದೆ.
ಒತ್ತುವರಿ ನಡೆದಿರುವ ಪ್ರದೇಶಗಳನ್ನು ಗುರುತಿಸಿ, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಕಂದಾಯ ಹಾಗೂ ಪೊಲೀಸ್​ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಅಕ್ರಮವಾಗಿ ಸಂಸ್ಥೆಯ ಜಾಗವನ್ನು ಆಕ್ರಮಿಸಿಕೊಂಡಿರುವ ಬಗ್ಗೆ 10 ಪ್ರಕರಣಗಳನ್ನು ದಾಖಲಿಸಿ, 40 ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಯ ಸ್ವತ್ತಿನ ದಾಖಲೆಗಳು, ಕಂದಾಯ ದಾಖಲೆಗಳು ಹಾಗೂ ಸ್ಥಳ ಪರಿಶೀಲನೆಯ ಆಧಾರದ ಮೇಲೆ ಒತ್ತುವರಿಯನ್ನು ಗುರುತಿಸಿ, ಕಾನೂನುಬದ್ಧ ಪ್ರಕ್ರಿಯೆಯಂತೆ ತೆರವುಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಎರಡು ವರ್ಷಗಳಲ್ಲಿ ಹಂಚರಹಳ್ಳಿ (ಮಂಡೂರು), ಹುಚ್ಚನಪಾಳ್ಯ (ದಾಸನಪುರ), ಹಿರಂಡಹಳ್ಳಿ (ಹೊಸಕೋಟೆ), ಕೆಂಗೇರಿ, ತೋಟಗೆರೆ (ಹೆಸರಘಟ್ಟ), ಬೈರತಿ ಹಾಗೂ ಕಣ್ಣೂರು ಸೇರಿ ನಗರದ ವಿವಿಧ ಭಾಗಗಳಲ್ಲಿ ಬಿಎಂಟಿಸಿಗೆ ಸೇರಿದ ಜಾಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಇದರೊಂದಿಗೆ ಸಂಸ್ಥೆಯ ಜಾಗವನ್ನು ಮರುಪಡೆಯುವುದರ ಜತೆಗೆ, ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇತರ ಸಾರ್ವಜನಿಕ ಉದ್ದೇಶಗಳಿಗೆ ಈ ಆಸ್ತಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದೆ.
ಸಂಸ್ಥೆಯ ಆಸ್ತಿಯ ಸಂರಕ್ಷಣೆಯಲ್ಲಿ ಯಾವುದೇ ರ್ನಿಲಕ್ಷ$್ಯಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಅಕ್ರಮ ಒತ್ತುವರಿ ಕಂಡುಬರುತ್ತದೆಯೋ ಅಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

ಆಸ್ತಿ ಸಂರಕ್ಷಣೆಗೆ ಆದ್ಯತೆ

ಬಿಎಂಟಿಸಿಯ ಜಾಗ ಹಾಗೂ ಸ್ಥಿರಾಸ್ತಿಗಳು ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ಪ್ರಮುಖ ಸಂಪನ್ಮೂಲಗಳಾಗಿವೆ. ಅವುಗಳನ್ನು ಸಂರಕ್ಷಿಸುವುದು ಆಡಳಿತಾತ್ಮಕ ಜವಾಬ್ದಾರಿಯ ಜತೆಗೆ, ಭವಿಷ್ಯದ ಸಾರ್ವಜನಿಕ ಸಾರಿಗೆ ಅಗತ್ಯಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.