BMTC 
ಬೆಂಗಳೂರು

ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಬೆಂಕಿಗೆ ಆಹುತಿ

ಚಾಲಕನ ಜಾಣತನದಿಂದ ಪ್ರಯಾಣಿಕರು safe, ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ದರುಂತ

ಬೆಂಗಳೂರು: ಪ್ರಯಾಣಿಕರನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬಸ್ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ಬೆಳಗ್ಗೆ 9.15ರ ವೇಳೆಗೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಸಮೀಪ ಹೊರಟಿದ್ದ ಬಸ್‌ನಲ್ಲಿ ದಟ್ಟವಾಗಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ, ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.

ಪ್ರಯಾಣಿಸುತ್ತಿದ್ದ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಅವಸರದಲ್ಲಿ ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ ಅಗ್ನಿಶಾಮಕ ಉಪಕರಣ ಬಳಸಿ ಬೆಂಕಿ ನಂದಿಸಲು ಯತ್ನಿಸಿದರು.

ಬೆಂಕಿ ಪ್ರಖರತೆ ನಿಯಂತ್ರಣಕ್ಕೆ ಬರದ ಹಿನ್ನೆಲೆ ಚಾಲಕನು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಅಷ್ಟರ ವೇಳೆಗೆ ಬೆಂಕಿಯು ಬಸ್‌ನ ಅರ್ಧ ಭಾಗಕ್ಕೆ ಹೊತ್ತಿಕೊಂಡಿತ್ತು. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ವಾಹನ ಸಮೇತ ಬಂದು ಬೆಂಕಿ ನಂದಿಸಿದರು.

ಸ್ಥಳಕ್ಕೆ ಬಿಎಂಟಿಸಿಯ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಅವಘಡವು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿರಬಹುದೆಂದು ಶಂಕಿಸಿದ್ದು, ಘಟನೆಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ದುರಂತ ಸಂಬಂಧ ಪ್ರಯಾಣಿಕರಲ್ಲಿ ವಿಷಾದ ವ್ಯಕ್ತಪಡಿಸಿದ ಬಿಎಂಟಿಸಿ, ‘ಪ್ರಯಾಣಿಕರ ಸುರಕ್ಷತೆ ಬಿಎಂಟಿಸಿಯ ಪ್ರಮುಖ ಆದ್ಯತೆಯಾಗಿದೆ. ಘಟನೆ ಕುರಿತು ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವುದಾಗಿ ಸಂಸ್ಥೆ ತಿಳಿಸಿದೆ.