ಮೆಟ್ರೋ 
ಬೆಂಗಳೂರು

ಡಿಸೆಂಬರ್​ಗೆ ನೀಲಿಮಾರ್ಗ ಸಂಚಾರಕ್ಕೆ ಸಜ್ಜು!| METRO

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿಗೆ ತಲುಪಿದ ಮೊದಲ ಮೆಟ್ರೋ ರೈಲು
  • ಏರ್​ಪೋರ್ಟ್​ ಮಾರ್ಗದ ಕಾಮಗಾರಿಗೆ ವೇಗ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಬಹುನಿರೀಕ್ಷಿತ ನೀಲಿ ಮಾರ್ಗದ ಯೋಜನೆಗೆ ವೇಗ ಲಭಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ಮೆಟ್ರೋ ರೈಲು ಗುರುವಾರ ಬೆಳಗ್ಗೆ ನಗರದ ಬೈಯಪ್ಪನಹಳ್ಳಿ ಮೆಟ್ರೋ ಡಿಪೋಗೆ ತಲುಪಿದೆ. 
ಸಿಲ್ಕ್​ ಬೋರ್ಡ್​ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗ ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಈ ವರ್ಷದ ಡಿಸೆಂಬರ್​ ವೇಳೆಗೆ ಮೊದಲ ಹಂತದ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಹೊಂದಿದೆ.
ಸುಮಾರು 58.19 ಕಿಲೋ ಮೀಟರ್​ ಉದ್ದದ ನೀಲಿ ಮಾರ್ಗಕ್ಕಾಗಿ ಬಿಎಂಆರ್​ಸಿಎಲ್​ ಒಟ್ಟು 38 ಚಾಲಕರಹಿತ ಮೆಟ್ರೋ ರೈಲುಗಳ ಪೂರೈಕೆಗೆ ಬೆಮೆಲ್​ ಸಂಸ್ಥೆಗೆ ಆದೇಶ ನೀಡಿದೆ. ಈ ಪೈಕಿ ಮೊದಲ ರೈಲು ಈಗ ಬೆಂಗಳೂರಿಗೆ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷಾ ಸಂಚಾರ ಸೇರಿ ವಿವಿಧ ತಾಂತ್ರಿಕ ಪ್ರಕ್ರಿಯೆಗಳು ಆರಂಭವಾಗಲಿವೆ.
ಯೋಜನೆಯ ಮೊದಲ ಹಂತವಾಗಿ ಸೆಂಟ್ರಲ್​ ಸಿಲ್ಕ್​ ಬೋರ್ಡ್​ನಿಂದ ಕೆ.ಆರ್​.ಪುರಂವರೆಗಿನ 19.75 ಕಿಲೋಮೀಟರ್​ ಉದ್ದದ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಈ ವಿಭಾಗದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳು ನಿಮಾರ್ಣವಾಗುತ್ತಿವೆ. 14,788 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಟ್ಟು 30 ನಿಲ್ದಾಣಗಳು ಇರಲಿವೆ.
2027ರಲ್ಲಿ 2ನೇ ಹಂತ
ಇನ್ನು ಯೋಜನೆಯ ಎರಡನೇ ಹಂತವಾದ ಕೆ.ಆರ್​.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಸುಮಾರು 37 ಕಿಲೋಮೀಟರ್​ ಉದ್ದದ ಮಾರ್ಗವು 2027ರ ಡಿಸೆಂಬರ್​ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬ್ಲೂ ಲೈನ್​ ಪೂರ್ಣಗೊಂಡ ಬಳಿಕ ನಗರದ ಪೂರ್ವ ಭಾಗ ಹಾಗೂ ವಿಮಾನ ನಿಲ್ದಾಣ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದ್ದು, ಈ ಮಾರ್ಗದಲ್ಲಿನ ವಾಹನ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.