biochar 
ಬೆಂಗಳೂರು

ಕೃಷಿ ತ್ಯಾಜ್ಯದಿಂದ ‘ಬಯೋಚಾರ್’ ಉತ್ಪಾದನೆ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಆರ್​​ಕೆವಿವೈ ಯೋಜನೆಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಪ್ರಾತ್ಯಕ್ಷಿಕೆ
  • ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳಿಂದ ರೈತರಿಗೆ ಜನಜಾಗೃತಿ
ಬೆಂಗಳೂರು: ರೈತರ ಜಮೀನಿನಲ್ಲಿ ಮಣ್ಣಿನ ಲವತ್ತತೆ ಹಾಗೂ ಬೆಳೆ ಉತ್ಪಾದಕತೆಯನ್ನು ವೃದ್ಧಿಸುವ ಜೈವಿಕ ಇದ್ದಿಲು (ಬಯೋಚಾರ್) ಉತ್ಪಾದಿಸುವ ಹೊಸ ತಾಂತ್ರಿಕತೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್-ಬಿ) ಶೋಧಿಸಿ ಕೃಷಿಕರಿಗೆ ತಲುಪಿಸಲು ಮುಂದಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್​​ಕೆವಿವೈ) ಅಡಿಯಲ್ಲಿ ‘ಕೃಷಿ ತ್ಯಾಜ್ಯದಿಂದ ಉತ್ಪಾದನೆ’ ತಂತ್ರಜ್ಞಾನ ಅಭಿವೃದ್ಧಿಪಡಿಸಿ ವಿಶೇಷ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತಿದೆ. ಕಡಿಮೆ ವೆಚ್ಚದ ಬಯೋಚಾರ್ ಡ್ರಮ್‌ಗಳನ್ನು ಬಳಸಿಕೊಂಡು ಕೃಷಿ ತ್ಯಾಜ್ಯವನ್ನು ಅಮೂಲ್ಯ ಜೈವಿಕ ಇದ್ದಿಲು ಆಗಿ ಪರಿವರ್ತಿಸುವ ವಿಧಾನವು ರೈತರಿಗೆ ವರದಾನವಾಗಿದೆ. ಪ್ರಾತ್ಯಕ್ಷಿಕೆ ಮೂಲಕ ಬಯೋಚಾರ್‌ನ ಪೋಷಕಾಂಶಗಳ ಸಂಯೋಜನೆ ಹಾಗೂ ಅದರ ಪ್ರಯೋಜನಗಳ ಕುರಿತು ವಿವಿಯ ಮುಖ್ಯ ವಿಜ್ಞಾನಿ ಡಾ. ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಲಭ್ಯವಿರುವ ಕೃಷಿ ಸಾವಯವ ತ್ಯಾಜ್ಯದಿಂದ ಸಮರ್ಪಕವಾಗಿ ಮರುಬಳಕೆ ಮಾಡುವುದರಿಂದ ಒಟ್ಟು 4.21 ದಶಲಕ್ಷ ಟನ್ ಬಯೋಚಾರ್ ಉತ್ಪಾದಿಸಲು ಅವಕಾಶವಿದೆ. ಅಲ್ಲದೆ, ಪ್ರತಿ 300 ಕೆಜಿ ಬಯೋಚಾರ್‌ನಲ್ಲಿ ಶೇ.70 ಅಂದರೆ 210 ಕೆಜಿ ಇಂಗಾಲ, ಶೇ.1 (3 ಕೆಜಿ) ಸಾರಜನಕ, ಶೇ.0.3ರಷ್ಟು (0.9 ಕೆಜಿ) ರಂಜಕ ಹಾಗೂ ಶೇ.1.5 (4.5 ಕೆಜಿ) ಪೊಟ್ಯಾಷ್ ಅಂಶ ಅಡಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ತಡೆಗೆ ಸಹಕಾರಿ:

ಕೃಷಿ ತ್ಯಾಜ್ಯವನ್ನು ಸುಟ್ಟು ಪರಿಸರ ಮಾಲಿನ್ಯ ಮಾಡುವುದರ ಬದಲಿಗೆ ಈ ರೀತಿ ನಿಯಂತ್ರಿತ ವಿಧಾನದಲ್ಲಿ ಬಯೋಚಾರ್ ಮಾಡುವುದರಿಂದ ಸಮರ್ಪಕವಾಗಿ ತ್ಯಾಜ್ಯ ನಿರ್ವಹಿಸುವ ಜತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಕಡಿಮೆ ವೆಚ್ಚದಲ್ಲಿ ಮಣ್ಣಿನ ಗುಣಲಕ್ಷಣಗಳನ್ನು ಉತ್ತಮಪಡಿಸಲು ಹಾಗೂ ನೀರು, ಪೋಷಕಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ರೈತರು ತಮ್ಮ ಹೊಲಗಳಲ್ಲೇ ಲಭ್ಯವಿರುವ ತೆಂಗಿನಗರಿ, ಮೆಕ್ಕೆಜೋಳದ ದಿಂಡು ಹಾಗೂ ಇತರ ಸಾವಯವ ವಸ್ತುಗಳನ್ನು ಬಳಸಿ ಇದನ್ನು ಸುಲಭವಾಗಿ ತಯಾರಿಸಿಕೊಳ್ಳುವ ಮೂಲಕ ರಸಗೊಬ್ಬರಗಳ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಿ, ಸುಸ್ಥಿರ ಇಳುವರಿಯೊಂದಿಗೆ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ ವಿವಿಯ ಸಂಶೋಧನಾ ನಿರ್ದೇಶಕ ಡಾ. ಮೂಡಲಗಿರಿಪ್ಪ.
"

ಪ್ರಸ್ತುತ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ 0.05ಕ್ಕಿಂತ ಕುಂಠಿತವಾಗಿದ್ದು, ಇದು ಕೃಷಿ ಕ್ಷೇತ್ರದ ಭವಿಷ್ಯದ ದೊಡ್ಡ ಸವಾಲಾಗಿದೆ. ಬಯೋಚಾರ್ ಸ್ಥಳೀಯ ಸಂಪನ್ಮೂಲವನ್ನು ಬಳಸಿ ಪುನಃ ಮಣ್ಣಿಗೆ ಇಂಗಾಲದ ಅಂಶವನ್ನು ಸೇರಿಸುವ ಮೂಲಕ ಕೃಷಿಯನ್ನು ಸುಸ್ಥಿರಗೊಳಿಸಲಾಗುತ್ತಿದೆ. 

- ಡಾ. ಎಸ್.ವಿ. ಸುರೇಶ್, ಕುಲಪತಿ, ಯುಎಎಸ್-ಬಿ