ಭಾಷಿಣಿ ಕಾರ್ಯಾಗಾರದಲ್ಲಿ ಐಟಿ- ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಪ್ರಜಾಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ 
ಬೆಂಗಳೂರು

ಸ್ಥಳೀಯ ಭಾಷೆಯಲ್ಲಿ ಸೇವೆಗೆ ಭಾಷಿಣಿ ಎಐ

ಭಾಷಿಣಿ ತಂತ್ರಜ್ಞಾನದ ಸದ್ಬಳಕೆ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ, ವಿಕಾಸಸೌಧದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಗಾರ

ಬೆಂಗಳೂರು: ಡಿಜಿಟಲ್ ಆಡಳಿತ ಮತ್ತು ನಾಗರಿಕ ಸೇವೆಗಳನ್ನು ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆಯಲ್ಲೇ ನೀಡಲು ಭಾಷಿಣಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಐಟಿ- ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇ-ಆಡಳಿತ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಏರ್ಪಡಿಸಿದ್ದ ಭಾಷಿಣಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಭಾರತದಂತಹ ವೈವಿಧ್ಯಮಯ ದೇಶದಲ್ಲಿ 22ಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಆಧಾರಿತ ಮತ್ತು ಭಾಷಾಂತರ ತಂತ್ರಜ್ಞಾನಗಳನ್ನು ತಂದಿರುವ ಭಾಷಿಣಿ ತಂಡದ ಸಾಧನೆ ಶ್ಲಾಘನೀಯವಾಗಿದೆ.

ಕರ್ನಾಟಕವು ಒಂದು ರಾಜ್ಯ, ಹಲವು ಜಗತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ 150 ಕಿಲೋ ಮೀಟರ್‌ಗೆ ಭಾಷಾ ವೈವಿಧ್ಯತೆ, ಉಪಭಾಷೆಗಳು ಮತ್ತು ಸಂಸ್ಕೃತಿ ಬದಲಾಗುತ್ತದೆ. ಕಲ್ಯಾಣ ಕರ್ನಾಟಕ, ಕರಾವಳಿ, ಮಲೆನಾಡು, ಮೈಸೂರು ಹಾಗೂ ಬಯಲು ಸೀಮೆ ಭಾಗಗಳಲ್ಲಿ ಕನ್ನಡದ ಜತೆಗೆ ತಮಿಳು, ತೆಲುಗು, ಮರಾಠಿ, ಉರ್ದು, ತುಳು, ಬ್ಯಾರಿ ಮುಂತಾದ ಭಾಷೆಗಳ ಪ್ರಭಾವವಿದೆ. ಈ ಎಲ್ಲಾ ಭಾಗಗಳ ಜನರಿಗೆ ಅವರದ್ದೇ ಭಾಷೆ-ಉಪಭಾಷೆಯಲ್ಲಿ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಪ್ರಸ್ತುತ ಸಾರ್ವಜನಿಕರು ವೆಬ್ ಫಾರ್ಮ್‌ಗಳನ್ನು ಭರ್ತಿ ಮಾಡುವುದಕ್ಕಿಂತ ಧ್ವನಿ, ವಾಟ್ಸ್‌ಆ್ಯಪ್, ಚಾಟ್‌ಬಾಟ್‌ಮುಂತಾದ ಸರಳ ಮಾಧ್ಯಮಗಳನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪ್ರಜಾ ಸೇವೆ ಮತ್ತು ಇ-ಆಡಳಿತ ವಿಭಾಗಗಳ ಮೂಲಕ ಭಾಷಿಣಿ ಎಐ ತಂತ್ರಜ್ಞಾನ ಬಳಸಿ ಇನ್ನಷ್ಟು ಸರಳಗೊಳಿಸಲು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಈಗಾಗಲೇ 18 ಸಾವಿರಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿದ್ದು, 1,500ಕ್ಕೂ ಹೆಚ್ಚು ನವೋದ್ಯಮಗಳಿಗೆ ಸರ್ಕಾರ ಧನಸಹಾಯ ನೀಡಿದೆ. ಇತ್ತೀಚೆಗೆ ಜಾರಿಗೆ ತರಲಾದ ’ಗವರ್ನ್‌ಮೆಂಟ್ ಫಸ್ಟ್ ಪಾಲಿಸಿ’ ಮೂಲಕ ನವೋದ್ಯಮಿಗಳಿಗೆ ಸರ್ಕಾರವೇ ಮೊದಲ ಗ್ರಾಹಕನಾಗಿ ಬೆಂಬಲ ನೀಡಲಿದೆ. ಅಲ್ಲದೆ, ಡೀಪ್‌ಟೆಕ್ ಹಾಗೂ ಎಐ ನಾವೀನ್ಯತೆಗಳಿಗೆ 1 ಕೋಟಿ ರೂ.ಗಳವರೆಗೆ ಅನುದಾನ ಒದಗಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಜಾಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ನಾಗ್, ಇ-ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಮತ್ತಿತರು ಭಾಗವಹಿಸಿದ್ದರು.

ಬೆಂಗಳೂರು ಟೆಕ್ ಸಮಿಟ್‌ಗೆ ಆಹ್ವಾನ: ನವೆಂಬರ್ 17ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ’ಭಾಷಿಣಿ’ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಇದನ್ನು ವಿಸ್ತರಿಸಲು ಭಾಷಿಣಿ ತಂಡಕ್ಕೆ ಸಚಿವರು ಮುಕ್ತ ಆಹ್ವಾನ ನೀಡಿದರು.