global-financial-hub 
ಬೆಂಗಳೂರು

2037ಕ್ಕೆ ಜಾಗತಿಕ ಆರ್ಥಿಕ ಕೇಂದ್ರವಾಗಿ ಬೆಂಗಳೂರು

ಪ್ರಮುಖ ಮುಖ್ಯಾಂಶಗಳು

  • 35 ಲಕ್ಷ ಕೋಟಿ ರೂ.ಗೂ ಅಧಿಕ ಆರ್ಥಿಕತೆ ಅಂದಾಜು
  • 30 ಲಕ್ಷ ಹೊಸ ಉದ್ಯೋಗ ಸೃಷ್ಟಿಗೆ ರಾಜ್ಯ ಸರ್ಕಾರ ಗುರಿ
ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶವನ್ನು (ಬಿಎಂಆರ್) ಜಾಗತಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರವು ಮಹತ್ತರ ಹೆಜ್ಜೆ ಇಟ್ಟಿದೆ. 2037ರ ವೇಳೆಗೆ ಬೆಂಗಳೂರನ್ನು ನಾವೀನ್ಯತೆ, ಕೃತಕ ಬುದ್ಧಿಮತ್ತೆ (ಎಐ), ಸುಧಾರಿತ ಉತ್ಪಾದನೆ ಮತ್ತು ಸುಸ್ಥಿರ ನಗರಾಭಿವೃದ್ಧಿಯಲ್ಲಿ ವಿಶ್ವದ ಪ್ರಮುಖ ಹಬ್‌ಗಳಲ್ಲಿ ಒಂದಾಗಿ ರೂಪಿಸುವ ಬೃಹತ್ ಯೋಜನೆಯ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯ ಪರಿಶೀಲನೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎಂಪ್ಲಾಯ್‌ಮೆಂಟ್ ಆ್ಯಂಡ್ ಫೌಂಡೇಶನ್ (ಐಎಸ್‌ಇಜಿ ಫೌಂಡೇಶನ್) ವಿವಿಧ ವಲಯಗಳನ್ನು ಒಳಗೊಂಡ ಸಮಗ್ರ ಮಾರ್ಗಸೂಚಿಯನ್ನು ಪರಾಮರ್ಶಿಸಲಾಯಿತು.


30 ಲಕ್ಷ ಹೊಸ ಉದ್ಯೋಗ ಸೃಷ್ಟಿ:

ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ನಿಕಟಪೂರ್ವ ಬೆಂಗಳೂರು ನಗರ ಅಭಿವೃದ್ಧಿಯ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಹಾಗೂ ಐಎಸ್‌ಇಜಿ ಫೌಂಡೇಶನ್ ಒಡಂಬಡಿಕೆಗೆ ಸಹಿ ಹಾಕಿವೆ. ಈ ಯೋಜನೆಯ ಮೂಲಕ ಭವಿಷ್ಯದಲ್ಲಿ ಬೆಂಗಳೂರಿನ ಆರ್ಥಿಕತೆಯನ್ನು 390-420 ಶತಕೋಟಿ ಅಮೆರಿಕನ್ ಡಾಲರ್ (ಸುಮಾರು 35 ಲಕ್ಷ ಕೋಟಿ ರೂ.) ಮಟ್ಟಕ್ಕೆ ವಿಸ್ತರಿಸುವ ಹಾಗೂ ಹೆಚ್ಚುವರಿಯಾಗಿ 30 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.
ಪ್ರಸ್ತುತ ಬಿಎಂಆರ್ ವ್ಯಾಪ್ತಿಯಲ್ಲಿ 1.5 ಕೋಟಿ ಜನಸಂಖ್ಯೆ ಮತ್ತು 8,000 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, 149 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಆರ್ಥಿಕತೆಯೊಂದಿಗೆ ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಶೇ.43ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಬೆಂಗಳೂರಿನ ತಲಾ ಜಿಡಿಪಿ ಅಂದಾಜು 9,700 ಅಮೆರಿಕನ್ ಡಾಲರ್ ಆಗಿದ್ದು, ಇದು ಕರ್ನಾಟಕದ ಸರಾಸರಿಗಿಂತ (5,000 ಅಮೆರಿಕನ್ ಡಾಲರ್) 1.9 ಪಟ್ಟು ಮತ್ತು ಭಾರತದ ಸರಾಸರಿಗಿಂತ (2,500 ಅಮೆರಿಕನ್ ಡಾಲರ್) ನಾಲ್ಕು ಪಟ್ಟು ಹೆಚ್ಚಾಗಿದೆ. 2015-25ರ ಅವಧಿಯಲ್ಲಿ ಬೆಂಗಳೂರು ಶೇ.9.7 ವಾರ್ಷಿಕ ಸಂಯೋಜಿತ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಗುರಿ ತಲುಪಲು ಅನುಕೂಲಕರ ವಾತಾವರಣ ಕಾನುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಅಂತಿಮ:

ಯೋಜನೆಯ ಯಶಸ್ಸಿಗಾಗಿ ಖಾಸಗಿ ವಲಯ ಹಾಗೂ ಹೂಡಿಕೆದಾರರನ್ನು ಒಳಗೊಂಡ ‘ಐಡಿಯಾಸ್ ಕಾರ್ಯಾಗಾರ-1’ ಅನ್ನು ಜೂನ್ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮುಂದಿನ ಹಂತದ ಸಭೆಗಳು ನಡೆದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿಎಂ ಹಾಗೂ ಡಿಸಿಎಂಗೆ ಅಂತಿಮ ಪ್ರಸ್ತಾವನೆ ಸಲ್ಲಿಸಲಿದ್ದು, ಆ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ.

ವಿಶ್ವದರ್ಜೆಯ ಸಾರಿಗೆ/ಮೂಲಸೌಕರ್ಯಕ್ಕೆ ಆದ್ಯತೆ:

* 4 ಹೊಸ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್
* 287 ಕಿ.ಮೀ. ಉದ್ದದ ವೃತ್ತಾಕಾರ ರೈಲು ಜಾಲ
* 400-500 ಕಿ.ಮೀ. ಹೆಚ್ಚುವರಿ ಮೆಟ್ರೋ ಜಾಲ
* 100-200 ಕಿ.ಮೀ. ಗ್ರೀನ್‌ಫೀಲ್ಡ್ ಮೆಟ್ರೋ ಕಾರಿಡಾರ್/ ವಿಸ್ತರಣೆ ಮಾರ್ಗ
* ಉಪನಗರ ರೈಲು ಯೋಜನೆ ವಿಸ್ತರಣೆ
* ಸಮಗ್ರ ರಸ್ತೆ ಮತ್ತು ಬಹುಮಾದರಿ ಸಾರಿಗೆ ಮೂಲಸೌಕರ್ಯ
* ಪ್ರಾದೇಶಿಕ ಸಂಪರ್ಕ ಹಾಗೂ ವಿಮಾನನಿಲ್ದಾಣ ಮೂಲಸೌಕರ್ಯ ಬಲವರ್ಧನೆ.