Bengaluru cost of living: ಬೆಂಗಳೂರಿನಲ್ಲಿ ಇಪ್ಪತ್ತು ಸಾವಿರ ಸಂಬಳ ಇಟ್ಕೊಂಡು ಬದುಕೋದು ಕಷ್ಟನಪ್ಪ. ಮೆಟ್ರೋ ಹಣ, ಊಟ, ತಿಂಡಿ, ಬಟ್ಟೆ, ಮನೆ ಬಾಡಿಗೆ ಯಾವುದಕ್ಕೂ ಸಾಕಾಗೋದೆ ಇಲ್ಲ ಎಂದು ತಿಂಗಳ ಕೊನೆಯಲ್ಲಿ ಒಂದಷ್ಟು ಹಣ ಸಾಲ ಮಾಡಿಬಿಟ್ಟಿರುತ್ತೇವೆ. ಆದ್ರೆ ಅಚ್ಚರಿ ಅನ್ನೋ ವಿಚಾರ ಏನು ಗೊತ್ತಾ ಇಲ್ಲೊಬ್ಬ ಯುವತಿ ಕೇವಲ 18 ಸಾವಿರ ರೂ. ಸಂಬಳದಲ್ಲಿ ಸಿಲಿಕಾನ್ ಸಿಟಿಯಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದಾರಂತೆ.
22 ವರ್ಷದ ಎಮಿ ಅರೋರಾ ಎಂಬ ಯುವತಿ Software Development Engineerನ ಇಂಟರ್ನ್. ಆಕೆಗೆ ತಿಂಗಳ ಸಂಬಳ ಸಿಗೋದು ಕೇವಲ 18 ಸಾವಿರ ರೂಪಾಯಿ. ಆಕೆ ಸದ್ಯ ತನ್ನ ಬಜೆಟ್ ಪ್ಲಾನ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಆಕೆಯ ಬಜೆಟ್ ಪ್ಲಾನ್ ಹೇಗಿದೆ?
ಆಕೆಗೆ ಬರುವ ಸಂಬಳದಲ್ಲಿ ಹೆಚ್ಚಾಗಿ ಖರ್ಚಾಗೋದು ಪಿಜಿಗೆ ತಿಂಗಳಿಗೆ 7,200ರೂಪಾಯಿಯನ್ನು ಆಕೆ ಪಾವತಿಸುತ್ತಾಳೆ, ಅಪಾರ್ಟ್ಮೆಂಟ್ ಅಥವಾ ಮನೆಯ ಬಾಡಿಗೆ, ಅಡ್ವಾನ್ಸ್ ವೆಚ್ಚ ತಪ್ಪಿಸಲು ಇದು ಸಹಕಾರಿ. ಊಟ, ತಿಂಡಿ ಖರ್ಚು 3,200 ರೂಪಾಯಿ. ಹೆಚ್ಚಾಗಿ ವರ್ಕ್ ಫ್ರಂ ಹೋಂ ಪಡೆಯುವ ಈಕೆಗೆ ಅಷ್ಟಾಗಿ ಪ್ರಯಾಣದ ವೆಚ್ಚ ತಾಕೋದಿಲ್ಲ. ಹೀಗಾಗಿ,ತಿಂಗಳಿಗೆ ಸುಮಾರು 1,600 ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾಳೆ.
ವೈಯಕ್ತಿಕ ಖರ್ಚಿಗೆ 5 ಸಾವಿರ ರೂ.ಮೀಸಲು
ಇನ್ನು ಹೊರಗಡೆ ಊಟ ಮತ್ತು ಒಳಗೆ ಆರ್ಡರ್ ಮಾಡಲು 2 ಸಾವಿರ ರೂಪಾಯಿ ಖರ್ಚು. ಆನ್‌ಲೈನ್ ಆರ್ಡರ್‌ಗಳಿಗೆ 2,000ರೂಪಾಯಿ ಖರ್ಚು ಮಾಡುತ್ತಾರೆ. ಇದಲ್ಲದೆ, ಸುಮಾರು 1,500 ಶಾಪಿಂಗ್ ಮತ್ತು ಇತರ ಖರ್ಚುಗಳಿಗೆ ಹೋಗುತ್ತದೆ. ಮಾನಸಿಕ ನೆಮ್ಮದಿಗೆ ಪಾಟರಿ ಕ್ಲಾಸ್ ಮತ್ತು ಪಿಜ್ಜಾ ತಯಾರಿ ಮಾಡಲು ಹೋಗುತ್ತೇನೆ ಆದರೆ, ಅಲ್ಲಿ ನಾನು ಯಾವುದೇ ರೀತಿಯ ಶುಲ್ಕ ಪಾವತಿ ಮಾಡೋದಿಲ್ಲ ಎಂದಿದ್ದಾರೆ.
ನೆಟ್ಟಿಗರು ಏನಂತಾರೆ?
ಬೆಂಗಳೂರಿನಲ್ಲಿ ಬದುಕಲು ಲಕ್ಷಾಂತರ ರೂಪಾಯಿ ಬೇಕು ಎನ್ನುವವರ ನಡುವೆ, ಎಮಿ ಅವರ ಈ ಲೆಕ್ಕಾಚಾರವು ಮಧ್ಯಮ ವರ್ಗದ ಉದ್ಯೋಗಿಗಳಿಗೆ ಮತ್ತು ಇಂಟರ್ನ್‌ಗಳಿಗೆ ಮಾದರಿಯಾಗಿದೆ ಎಂದು ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಸಹ ನನ್ನ ಬಜೆಟ್ ಸರಿ ಪಡಿಸಿಕೊಳ್ಳಬೇಕೆಂದು ಭಾವಿಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜೆನ್ಸೀಸ್).