- ಕರಡು ಪಟ್ಟಿಯಲ್ಲಿ 45.65 ಲಕ್ಷ ಹೆಸರಿಗೆ ಕೊಕ್
- ನಮೂನೆ 6 ನೀಡಿ ಹೊಸದಾಗಿ ಹೆಸರು ಸೇರ್ಪಡೆ ಆಗಬಹುದು
- 24.06 ಲಕ್ಷ ಮಂದಿಗೆ ನೋಟಿಸ್ ಜಾರಿಗೆ ಸಿದ್ಧತೆ
ಬೆಂಗಳೂರು: ಜಿಬಿಎ ಸೇರಿ ಬೆಂಗಳೂರು ಮಹಾನಗರದಲ್ಲಿ ಕೈಗೊಂಡಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಬಳಿಕ ಕರಡು ಮತಪಟ್ಟಿಯಲ್ಲಿ 56.99 ಲಕ್ಷ ವೋಟರ್ಸ್ ಉಳಿದುಕೊಂಡಿದ್ದಾರೆ. ಈ ಮುನ್ನ 1.03 ಕೋಟಿ ಮತದಾರರಿದ್ದರೂ, ಎಸ್‌ಐಆರ್ ವೇಳೆ ಮಾಹಿತಿ ನೀಡದ ಕಾರಣ 45.65 ಲಕ್ಷ ಹೆಸರಿಗೆ ಕೊಕ್ ನೀಡಲಾಗಿದೆ.
ಇಡೀ ರಾಜ್ಯದಲ್ಲೇ ರಾಜಧಾನಿಯಲ್ಲಿ ಅತಿಹೆಚ್ಚು ಮತದಾರರ ಹೆಸರನ್ನು ಕರಡುಪಟ್ಟಿಯಿಂದ ಹೊರಗಿಡಲಾಗಿದೆ. ಎಸ್‌ಐಆರ್ ವೇಳೆ ನಮೂನೆ ಭರ್ತಿ ಮಾಡಿ ವಾಪಸ್ ನೀಡದವರ ಹೆಸರನ್ನು ಕರಡುಪಟ್ಟಿಯಲ್ಲಿ ಸೇರಿಸಿಲ್ಲ. ಹಾಗಾಗಿ ಅಂತಹವರ ಹೆಸರು ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಸದಾಗಿ ಹೆಸರು ಸೇರಿಸಲು ಈಗಲೂ ಅವಕಾಶವಿದ್ದು ನಮೂನೆ 6ಅನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಎಂದು ಕರಡುಪಟ್ಟಿ ಬಿಡುಗಡೆಗೊಳಿಸಿದ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಸೋಮವಾರ ತಿಳಿಸಿದ್ದಾರೆ.
ನಗರ ಜಿಲ್ಲೆಯಲ್ಲಿ ಹೆಚ್ಚು ಮತದಾರರು:
ಜಿಬಿಎ ಸೇರಿ ಬೆಂಗಳೂರು ಕಂದಾಯ ಜಿಲ್ಲೆಯನ್ನು ಚುನಾವಣಾ ದೃಷ್ಟಿಯಿಂದ ಉತ್ತರ, ದಕ್ಷಿಣ, ಕೇಂದ್ರ ಹಾಗೂ ನಗರ ಜಿಲ್ಲೆ ಎಂಬ 4 ಹೆಚ್ಚುವರಿ (ಅಪರ) ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರ ಪೈಕಿ ನಗರ ಜಿಲ್ಲೆಯಲ್ಲಿ ಅತಿಹೆಚ್ಚು 23.03 ಲಕ್ಷ ಮತದಾರರಿದ್ದಾರೆ. ಉತ್ತರ-12.80 ಲಕ್ಷ, ದಕ್ಷಿಣ-10.86 ಲಕ್ಷ ಹಾಗೂ ಕೇಂದ್ರ ಅಪರ ಜಿಲ್ಲೆಯಲ್ಲಿ 10.29 ಲಕ್ಷ ಮತದಾರರಿದ್ದಾರೆ. ಕರಡು ಪಟ್ಟಿಯನ್ನು ಪಾಲಿಕೆ/ಪಂಚಾಯಿತಿಯ ಎಆರ್‌ಒ ಕಚೇರಿಗಳು ಹಾಗೂ ಆಯೋಗದ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ಮತಗಟ್ಟೆ ಸಂಖ್ಯೆ ಹೆಚ್ಚಳ:
ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಒಟ್ಟು 8,972 ಮತಗಟ್ಟೆಗಳಿದ್ದವು. ಎಸ್‌ಐಆರ್ ಬಳಿಕ ಪ್ರತಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ಕಾರಣ ಹೆಚ್ಚುವರಿಯಾಗಿ 36 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಈಗ ಒಟ್ಟಾರೆ ಮತಗಟ್ಟೆಗಳ ಸಂಖ್ಯೆ 9,008ಕ್ಕೇ ಏರಿದೆ.
ಎಸ್‌ಐಆರ್ ನಂತರವೂ 28 ಮತಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಶಿವಾಜಿನಗರ ಕ್ಷೇತ್ರ ಕ್ರಮವಾಗಿ ಅತಿ ಹೆಚ್ಚು ಹಾಗೂ ಅಡಿ ಕಡಿಮೆ ಮತದಾರರನ್ನು ಹೊಂದಿವೆ. ಈ ಸಂಖ್ಯೆ ಅಂತಿಮ ಮತಪಟ್ಟಿ ಪ್ರಕಟವಾದ ಬಳಿಕ ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ.
ಸುದ್ದಿಗೋಷ್ಠಿಯಲ್ಲಿ ಜಿಬಿಎ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಪಾಲಿಕೆಗಳ ಆಯುಕ್ತರಾದ ಕೆ.ಎನ್. ರಮೇಶ್, ಜಿ.ಜಗದೀಶ್, ಪಿ.ಸುನೀಲ್‌ಕುಮಾರ್ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರಿನಲ್ಲಿ ಎಸ್‌ಐಆರ್ ಅನ್ವಯ ಕರಡು ಮತಪಟ್ಟಿ ವಿವರ:
ಕರಡು/ಅಂತಿಮ ಮತಪಟ್ಟಿ ಪ್ರಕಟಕ್ಕೆ ವೇಳಾಪಟ್ಟಿ:
* ಕರಡು ಮತದಾರರ ಪಟ್ಟಿ ಪ್ರಕಟ - ಆ.24
* ಹಕ್ಕು/ಆಕ್ಷೇಪಣೆ ಸಲ್ಲಿಕೆಗೆ ಗಡುವು - ಸೆ.23
* ಹಕ್ಕು/ಆಕ್ಷೇಪಣೆ ವಿಲೇವಾರಿ - ಅ.10
* ಅಂತಿಮ ಮತದಾರರ ಪಟ್ಟಿ ಪ್ರಕಟ - ಅ.27
ಮಹಿಳಾ ಮತದಾರರ ಸಂಖ್ಯೆ ಏರಿಕೆ:
ಬೆಂಗಳೂರಿನಲ್ಲಿ ಹಿಂದಿನಿಂದಲೂ ಪುರಷ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು. ಇದೇ ಮೊದಲ ಬಾರಿಗೆ ಮಹಿಳಾ ವೋಟರ್ಸ್ ಅಧಿಕ ಸಂಖ್ಯೆಯಲ್ಲಿರುವುದು ವಿಶೇಷ. ಒಟ್ಟು 56.99 ಲಕ್ಷ ಮತದಾರರಲ್ಲಿ 27.69 ಲಕ್ಷ ಪುರಷರಿದ್ದರೆ, 29.29 ಲಕ್ಷ ಮಹಿಳೆ ವನಿತೆಯರಿದ್ದಾರೆ. ಎಸ್‌ಐಆರ್ ವೇಳೆ ಪುರಷರು ನಮೂನೆಯಲ್ಲಿ ವಿವರಗಳನ್ನು ತುಂಬಿ ವಾಪಸ್ ಮಾಡದಿರುವುದು ವನಿತೆಯರ ಸಂಖ್ಯೆ ಮತಪಟ್ಟಿಯಲ್ಲಿ ಏರಿಕೆ ಕಾಣಲು ಕಾರಣವೆಂದು ವಿಶ್ಲೇಷಿಸಲಾಗಿದೆ.
24.05 ಲಕ್ಷ ಮಂದಿಗೆ ನೋಟಿಸ್:
ಕರಡು ಮತಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವರ ಪೈಕಿ ಅಪೂರ್ಣ ಹೆಸರಿದ್ದವರು, ಹಿಂದಿನ ಮತಪಟ್ಟಿಯಲ್ಲಿನ ಹೆಸರಿಗೆ ಹೋಲಿಕೆ ಆಗದಿರುವುದು ಸೇರಿ ಕೆಲ ಅನುಮಾನಕ್ಕೆ ಕಾರಣರಾದವರ 24.05 ಲಕ್ಷ ಮಂದಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್‌ಗೆ ಸಮಜಾಯಿಷಿ ನೀಡಿದ್ದಲ್ಲಿ (ದಾಖಲೆ ಸಹಿತ) ಅಂತಹವರ ಹೆಸರನ್ನು ದೃಢಪಡಿಸಿಕೊಂಡು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
ಎಎಸ್‌ಡಿಡಿಒ ಪ್ರಮಾಣ ಶೇ.45.13:
ಬೆಂಗಳೂರು ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರ ಪೈಕಿ ಶೇ.45.13 (46.88 ಲಕ್ಷ) ವೋಟರ್ಸ್ ಹೆಸರನ್ನು ಗೈರು, ಸ್ಥಳಾಂತರ, ಮರಣ, ನಕಲು ಹಾಗೂ ಇತರ (ಎಎಸ್‌ಡಿಡಿಒ) ವರ್ಗಕ್ಕೆ ಸೇರಿಸಲಾಗಿದೆ. ಈ ಪೈಕಿ 7.27 ಲಕ್ಷ ಮಂದಿ ಸಮೀಕ್ಷೆ ವೇಳೆ ಗೈರಾಗಿದ್ದು, 32.74 ಲಕ್ಷ ಮಂದಿ ಸ್ಥಳಾಂತರ, 3.19 ಲಕ್ಷ ಮಂದಿ ಮೃತರಾಗಿದ್ದಾರೆ. 65,548 ಮಂದಿ ಒಂದಕ್ಕಿಂತ ಹೆಚ್ಚಿನ ಕಡೆ ಹೆಸರು ಹೊಂದಿದ್ದು, 3.04 ಲಕ್ಷ ಇತರ ಪ್ರಕರಣಗಳಾಗಿವೆ.
ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ:
ಮತದಾರರಲ್ಲಿ ಯಾವುದೇ ಗೊಂದಲ, ಅನುಮಾನಗಳಿದ್ದಲ್ಲಿ ದೂರು, ಸಲಹೆ ಮತ್ತು ಆಕ್ಷೇಪಣೆಗಳನ್ನು ಜಿಲ್ಲಾ ಸಹಾಯವಾಣಿ ಕೇಂದ್ರ 1950 ಅಥವಾ ಟೋಲ್ ಫ್ರೀ ಸಂಖ್ಯೆ 1800-4255-1950ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ.