ಎಐ ಸಹಾಯದಿಂದ ನಿರ್ಮಿಸಿದ ಚಿತ್ರ 
ಬೆಂಗಳೂರು

ಡೇಟಿಂಗ್​ಗಾಗಿ ಬುಕ್ ಮಾಡಿದ್ದು ಯುವತಿಯನ್ನ, ಮನೆಗೆ ಬಂದಿದ್ದು ಟ್ರಾನ್ಸಜೆಂಡರ್: 226 ಗ್ರಾಂ ಚಿನ್ನ ಕದ್ದು ಪರಾರಿ..Bengaluru

  • ಡೇಟಿಂಗ್​ ಅಪ್ಲಿಕೇಶನ್​ ಮೂಲಕ ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿದ ಯುವಕ.

  • 226 ಗ್ರಾಂ ಚಿನ್ನ ಕದ್ದು ಪರಾರಿಯಾದ ಟ್ರಾನ್ಸ್​ಜೆಂಡರ್​​.

  • ಚಂದ್ರಾಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು, ಮುಂದುವರೆದ ತನಿಖೆ.

ಬೆಂಗಳೂರು: ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ ವ್ಯಕ್ತಿಗೆ ಚಾಕು ತೋರಿಸಿ, ಬೆದರಿಕೆ ಹಾಕಿ 226 ಗ್ರಾಂ ಚಿನ್ನದ ಆಭರಣ ಕದ್ದು ಪರಾರಿಯಾದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ರೋಹಿತ್​ ನೀಡಿದ ದೂರಿನ ಆಧಾರದ ಮೇಲೆ ಚಂದ್ರಾ ಲೇಔಟ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಟಿ ಉದ್ಯೋಗಿಯಾದ ರೋಹಿತ್​ ತನ್ನ ಕುಟುಂಬಸ್ಥರೊಂದಿಗೆ ನಾಗರಭಾವಿಯಲ್ಲಿ ಏಳು ವರ್ಷಗಳಿಂದ ವಾಸ ಮಾಡುತ್ತಿದ್ದರು. ಅಕ್ಟೋಬರ್ 21 ರಂದು ಅವರ ಪತ್ನಿ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಮರುದಿನ ಮಧ್ಯಾಹ್ನ, ರೋಹಿತ್ ಹೆಸರಘಟ್ಟದಲ್ಲಿರುವ ತಮ್ಮ ಮನೆಗೆ ಹೋದರು. ಮನೆಯಲ್ಲಿ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಹೇಳಿ, ಕೀಲಿಯನ್ನು ನಂಬಿಕಸ್ಥ ಗೆಳೆಯ ತಿಲಕ್​​ (ಹೆಸರು ಬದಲಿಸಲಾಗಿದೆ) ಕೊಟ್ಟರು.

ಯುವತಿಯನ್ನು ಕರೆಸಿಕೊಂಡ ಯುವಕ

ಅಕ್ಟೋಬರ್ 22 ರಂದು ಸಂಜೆ 7.30 ರ ಸುಮಾರಿಗೆ ತಿಲಕ್ ಮನೆ ತಲುಪಿದರು. ಆ ದಿನ ಮನೆಯಲ್ಲಿದ್ದ ತಿಲಕ್ LGBTQA+ ಸಮುದಾಯವು ಬಳಸುವ ಡೇಟಿಂಗ್ ಅಪ್ಲಿಕೇಶನ್ Grindr ನಲ್ಲಿ ಒಬ್ಬ ಯುವತಿಯೊಂದಿಗೆ ಚಾಟಿಂಗ್​ ಮಾಡುತ್ತಿದ್ದರು. ಮೆಸೇಜ್ ಮಾಡುತ್ತಿರುವುದು ಮಹಿಳೆ ಎಂದು ತಿಳಿದ ಅವರು ಆಕೆಯನ್ನು ಮನೆಗೆ ಆಹ್ವಾನಿಸಿದ್ದರು. ರಾತ್ರಿ 10;15ಕ್ಕೆ ಮನೆಗೆ ಬಂದ ಮಹಿಳೆ ಮಾಸ್ಕ್​ ಧರಿಸಿದ್ದರು. ಆದರೆ, ಆಕೆ ಮಾಸ್ಕ್​ ತೆಗೆದಾಗ ಆಕೆ ಟ್ರಾನ್ಸ್​​ಜೆಂಡರ್​ ಎನ್ನುವುದು ತಿಳಿದುಬಂದಿದೆ.

20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಕಳವು

ನಂತರ, ಇಬ್ಬರೂ ಕೊಂಚ ಹೊತ್ತು ಮಾತನಾಡಿದ್ದಾರೆ. ಆನಂತರ ಆಕೆ ಎಲ್ಲಿ ಏನಿದೆ? ಎಂದು ಹುಡುಕಾಡಲು ಶುರು ಮಾಡಿದ್ದಾರೆ. ಇದನ್ನು ಆತ ಪ್ರಶ್ನಿಸಿದಾಗ ಕೊಲೆ ಮಾಡುವ ಬೆದರಿಕೆ ಹಾಕಿ, ಮತ್ತೊಬ್ಬರಿಗೆ ಕರೆ ಮಾಡಿದ್ದಾರೆ. ಕೆಲವೇ ಗಂಟೆಯಲ್ಲಿ ಎಂಟ್ರಿಯಾದ ಮತ್ತೊಬ್ಬ ವ್ಯಕ್ತಿ ತಿಲಕ್​ಗೆ ಪ್ರಾಣ ಬೆದರಿಕೆ ಹಾಕಿ ಹಾಲ್​ನಲ್ಲಿ ಕೂರಿಸಿದ್ದಾರೆ.

ಪೊಲೀಸರಿಗೆ ದೂರು

ಚಾಕು ಹಿಡಿದು ಒಬ್ಬರು ತಿಲಕ್​ನನ್ನು ಕಾವಲು ಕಾದರೆ, ಮತ್ತೊಬ್ಬ ವ್ಯಕ್ತಿ ಚಿನ್ನ ದೋಚಿದ್ದಾನೆ. ಇಬ್ಬರನ್ನು ತಡೆಯಲು ಯತ್ನಿಸಿದರೂ ಸಹ ತಿಲಕ್​​ನನ್ನು ಜೋರಾಗಿ ತಳ್ಳಿ ವಂಚಕರು ಪರಾರಿಯಾಗಿದ್ದಾರೆ. ಇದರಿಂದ ಗಾಬರಿಯಾದ ತಿಲಕ್​​​​ ರಾತ್ರಿ 11.45 ರ ಸುಮಾರಿಗೆ ತಿಲಕ್ ರೋಹಿತ್‌ಗೆ ಕರೆ ಮಾಡಿದ, ರೋಹಿತ್ ರಾತ್ರಿ 12.30 ರ ಸುಮಾರಿಗೆ ಮನೆಗೆ ಹಿಂತಿರುಗಿದನು.

ಮನೆಯ ಕಪಾಟು ಹುಡುಕಾಡಿದ ರೋಹಿತ್​, ಮಾಂಗಲ್ಯ ಸರ, ನೆಕ್ಲೇಸ್, ಬಳೆ ಮತ್ತು 3 ಚಿನ್ನದ ಚೈನ್​, ಬ್ರೇಸ್ಲೆಟ್​, 5 ಉಂಗುರ ಹಾಗೂ ಮೂರು ಚಿನ್ನದ ಓಲೆ ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ 226 ಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಚಂದ್ರಲೇಔಟ್​ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ಸಿಸಿಟಿವಿ, ಫೋನ್​ ಕರೆಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ, (ಏಜೆನ್ಸೀಸ್).