ಬೆಂಗಳೂರು

ನಂದಿನಿ ಹಾಲಿನ ದರ ಲೀ. 8ರೂ. ಹೆಚ್ಚಳ; ಕಾಫಿ-ಟೀ, ತಿಂಡಿಗಳ ಬೆಲೆ ಏರಿಕೆ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದಿಷ್ಟು..Bengaluru

  • ಹಾಲಿನಿಂದ ತಯಾರಿಸುವ ಎಲ್ಲ ಆಹಾರ ಬೆಲೆ ಹೆಚ್ಚಳಕ್ಕೆ ಮುಂದಾದ ಹೋಟೆಲ್ ಮಾಲೀಕರ ಸಂಘ.

  • ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಹೋಟೆಲ್ ಆಹಾರ ದರ ಏರಿಕೆ ಶಾಕ್.

  • 2 ರಿಂದ 3ರೂಪಾಯಿ ಏರಿಕೆ ಮಾಡಿದ್ದರೆ ಕಾಫಿ-ಟೀ ದರ ಏರಿಕೆ ಮಾಡ್ತಿರಲಿಲ್ಲ.

ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದ್ದು, ಪರಿಷ್ಕೃತ ದರ ನ.1ರಿಂದಲೇ ಜಾರಿಗೆ ಬರಲಿದೆ. ಹೈನುಗಾರಿಕೆ ನಿರತ ರೈತರ ಹಾಗೂ ಹಾಲು ಒಕ್ಕೂಟಗಳ ಬೇಡಿಕೆ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ ಬೆಂಗಳೂರಿನ ಹೋಟೆಲ್​ಗಳಲ್ಲಿ ಕಾಫಿ ಟೀ ಹಾಗೂ ತಿಂಡಿ-ತಿನಿಸುಗಳ ದರ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ ಒಂದೆರಡು ವರ್ಷದಿಂದ ಹಾಲಿನ ದರ ಏರಿಸಲು ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಇದರಿಂದ ಹೋಟೆಲ್​ಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಲಿದೆ. ಹೆಚ್ಚುವರಿ ವೆಚ್ಚವನ್ನು ಭರಿಸುವುದು ಕಷ್ಟವಾಗಲಿದೆ ಎಂದು ಹೋಟೆಲ್​ ಸಂಘ ಸರ್ಕಾರಕ್ಕೆ ಮುನ್ನೆಚ್ಚರಿಕೆ ಕೊಟ್ಟಿದೆ. ಅಲ್ಲದೇ ಈ ಬಗ್ಗೆ ಅ.29ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಪಿಸಿ ರಾವ್ ಹೇಳಿದ್ದೇನು?

'ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವು ಹಾಲಿನ ಬೆಲೆಯನ್ನು ಏಕಾಏಕಿ ಲೀಟರ್‌ಗೆ 8ರೂಪಾಯಿಯಷ್ಟು ಹೆಚ್ಚಿಸಿದೆ. ಒಂದು ವೇಳೆ ಇದು 2 ರಿಂದ 3ರೂಪಾಯಿ ಏರಿಕೆ ಮಾಡಿದ್ದರೆ,ನಾವು ಚಹಾ ಮತ್ತು ಕಾಫಿ ಬೆಲೆ ಹೆಚ್ಚಿಸುತ್ತಿರಲಿಲ್ಲ. ಹಾಲಿನ ದರದಲ್ಲಿನ ಈ ಭಾರಿ ಏರಿಕೆಯಿಂದಾಗಿ ಎಲ್ಲಾ ಹೋಟೆಲ್‌ಗಳು ಸಭೆ ನಡೆಸಿ ಚಹಾ ಮತ್ತು ಕಾಫಿ ಬೆಲೆಗಳನ್ನು ಅದಕ್ಕೆ ತಕ್ಕಂತೆ ಹೆಚ್ಚಿಸಲು ನಿರ್ಧರಿಸುತ್ತೇವೆ ಎಂದು ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪಿ.ಸಿ. ರಾವ್ ಹೇಳಿದರು.

ಈಗಾಗಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದರಿಂದ ಹೋಟೆಲ್ ನಿರ್ವಹಣೆ ಕಷ್ಟವಾಗಿದ್ದು, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಶೇ. 10 ಬೆಲೆ ಏರಿಕೆ ಸಾಧ್ಯತೆ ಇದೆ. ಆಯಾ ಹೋಟೆಲ್ಗಳೇ ದರ ನಿರ್ಧಾರ ಮಾಡಲಿವೆ. ನ. 1ರಿಂದ ಹಾಲಿನ ದರ ಏರಿಕೆ ಆಗಲಿದ್ದು, ಅಂದಿನಿಂದಲೇ ಹೋಟೆಲ್‌ಗಳಲ್ಲೂ ದರ ಏರಿಕೆ ಆಗಲಿದೆ.

ಕರ್ನಾಟಕ ರಾಜ್ಯ ಹೋಟೆಲ್ಸ್ ಅಸೋಸಿಯೇಷನ್​ನ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ ಮಾತನಾಡಿ, ಹಾಲು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಲನ್ನು ಪೌಷ್ಠಿಕ ಆಹಾರದ ಭಾಗವಾಗಿ ಪರಿಗಣಿಸಿರುವ ಗ್ರಾಹಕರು, ಮಕ್ಕಳು, ಗರ್ಭಿಣಿಯರ ಮೇಲೂ ಪರಿಣಾಮ ಬೀರಲಿದೆ ಎಂದರು.

ಅಲ್ಲದೆ, ಚಹಾ, ಕಾಫಿ ಹಾಗೂ ಇತರ ಪದಾರ್ಥಗಳ ಬೆಲೆಯನ್ನು ಶೇ. 5ರಷ್ಟು ಹೆಚ್ಚಿಸಲಿದ್ದೇವೆ. ಕ್ಯಾರೆಟ್ ಹಲ್ವಾ, ಪಾಯಸ, ಬಾದಾಮ್ ಹಾಲು ಮುಂತಾದ ಸಿಹಿತಿಂಡಿಗಳ ಬೆಲೆಯೂ ಹೆಚ್ಚಾಗಲಿದ್ದು, ಇದರ ಬಗ್ಗೆ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ಕೊಟ್ಟರು.

ಸರ್ಕಾರ ಡೇರಿ ವೆಚ್ಚವನ್ನು ಹತೋಟಿಗೆ ತರುವುದರ ಜತೆಗೆ ರೈತರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ಸೀಮಿತಗೊಳಿಸಬೇಕು. ಈ ರೀತಿಯ ದೊಡ್ಡ ಪ್ರಮಾಣದ ಬೆಲೆ ಏರಿಕೆ ಮಾಡುವಾಗ ಜನಸಾಮಾನ್ಯರ ಬಗ್ಗೆ ಚಿಂತನ-ಮಂಥನ ನಡೆಸುವುದು ಕೂಡ ಅತ್ಯಗತ್ಯವಿತ್ತು. ಹಾಲಿನ ದರ ಏರಿಕೆಯ ಜೊತೆಗೆ ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿ, ಬೇಳೆಕಾಳುಗಳ ಬೆಲೆ ಹೆಚ್ಚಳವಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಕಾರಣ ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ತಿಳಿಸಿದೆ, (ಏಜೆನ್ಸೀಸ್).