ನಂದಿನಿ ಮೊಸರು ದರ 2 ರೂ. ಕಡಿತ, ಆದರೂ ಸರ್ಕಾರದ ನಿರ್ಧಾರದ ಬಗ್ಗೆ ಗ್ರಾಹಕರಿಗಿಲ್ಲ ಸಮಾಧಾನ
ಗ್ರಾಹಕರು ಇನ್ನೂ 12 ರೂ. ಹೆಚ್ಚುವರಿ ಹಣ ಪಾವತಿಸಬೇಕು ಎಂದು ಕಿಡಿ
ಮೊಸರಿನ ದರ ಇಳಿಕೆ ಕೇವಲ ಕಣ್ಣೊರೆಸುವ ತಂತ್ರದಂತಿದೆ ಎಂದು ಸಾರ್ವಜನಿಕರ ಅಸಮಾಧಾನ
ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿ, ಕಾಂಗ್ರೆಸ್ ಸರ್ಕಾರ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಮೊಸರಿನ ದರವನ್ನು 2 ರೂಪಾಯಿ ಕಡಿತಗೊಳಿಸಿರುವ ನಿರ್ಧಾರವು ಮತ್ತಷ್ಟು ಕೆರಳವಂತೆ ಮಾಡಿದೆ. ಇದು ಸರ್ಕಾರದ ಕಣ್ಣೊರಿಸುವ ತಂತ್ರವಷ್ಟೇ. ನಮ್ಮ ಮೇಲೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಶೇ.50ರಷ್ಟು ಕಡಿಮೆ ಮಾಡಬೇಕಿತ್ತು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ. ಈ ಮೂಲಕ ಬೆಲೆ ಇಳಿಕೆಯಿಂದ ಬೆಂಗಳೂರಿನ ಹೋಟೆಲ್ ಮಾಲೀಕರು ಮತ್ತು ನಾಗರಿಕರಲ್ಲಿ ಹೆಚ್ಚಿನ ಸಂತೋಷವನ್ನೇನೂ ತಂದಿಲ್ಲ.
ಪ್ರತಿ ಲೀಟರ್ಗೆ 14ರಷ್ಟು ಹೆಚ್ಚಿಸಲಾಗಿದ್ದ ಮೊಸರಿನ ದರವನ್ನು ಈಗ ಕೇವಲ 2 ಮಾತ್ರ ಇಳಿಸಲಾಗಿದೆ. ಇದರರ್ಥ, ಗ್ರಾಹಕರಿಗೆ ಈಗಲೂ ಪ್ರತಿ ಕೆಜಿಗೆ ಪರಿಣಾಮಕಾರಿಯಾಗಿ 12 ಹೆಚ್ಚಳವಾದಂತೆಯೇ ಆಗಿದ್ದು, ಇದು ಹಾಲಿನ ದರ ಏರಿಕೆಯಾದ ಮೊತ್ತಕ್ಕಿಂತಲೂ ಹೆಚ್ಚಾಗಿದೆ. ಬೆಲೆ ಏರಿಕೆ, ಮತ್ತು ಇಳಿಕೆಯಲ್ಲಿ ಯಾವುದೇ ಹೊಂದಾಣಿಕೆ ಕಾಣುತ್ತಿಲ್ಲ ಎಂದು ಗ್ರಾಹಕರು ಕಿಡಿಕಾರಿದ್ದಾರೆ.
ವಿಜಯನಗರ ನಿವಾಸಿ ಅಕ್ಷತಾ ಮಾತನಾಡಿ, ಸರ್ಕಾರಕ್ಕೆ ನಿಜಕ್ಕೂ ಜನರ ಮೇಲೆ ಅಷ್ಟೆಲ್ಲ ಕಾಳಜಿ ಇದೆ ಎನ್ನುವುದೇ ಆದರೆ, ಏರಿಸಿದ್ದ ದರದಲ್ಲಿ ಶೇ.50ರಷ್ಟು ಕಡಿಮೆ ಮಾಡಬೇಕಿತ್ತು. ಕೇವಲ 2 ರೂಪಾಯಿ ಕಡಿತದಿಂದ ಯಾವುದೇ ದೊಡ್ಡ ಪರಿಣಾಮವಾಗಿಲ್ಲ. ನಾವು ಅಕ್ಟೋಬರ್ನಲ್ಲಿ ಪಾವತಿ ಮಾಡ್ತಿದ್ದ ದರಕ್ಕಿಂತ ಈಗ ಹೆಚ್ಚುವರಿಯಾಗಿ 12 ರೂಪಾಯಿ ಪಾವತಿ ಮಾಡುತ್ತೇವೆ ಅಸಮಾಧಾನ ವ್ಯಕ್ತಪಡಿಸಿದರು.
ಬನಶಂಕರಿ ನಿವಾಸಿ ಮಂಜುಳ ಮಾತನಾಡಿ, ರೆಸ್ಟೋರೆಂಟ್, ಹೋಟೆಲ್ನಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ನಂತರ ಆಹಾರದ ಬೆಲೆಯನ್ನು ಏರಿಕೆ ಮಾಡಿವೆ, ಈಗ ಸರ್ಕಾರ 2 ರೂಪಾಯಿ ಇಳಿಕೆ ಮಾಡಿರುವುದರಿಂದ ಅವರು ತಮ್ಮ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಎಲ್ಲ ಭಾರವನ್ನು ಗ್ರಾಹಕರ ಮೇಲೆ ಹಾಕಿ ಹಣ ಪೀಕುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ದುಬಾರಿ ಹೋಟೆಲ್ ಮೆನುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೃಹಿಣಿ ಉಮಾ ಮಾತನಾಡಿ, ಮಕ್ಕಳ ಆಹಾರ ಮೆನುವಿನಲ್ಲಿ ಹಾಲು ಪ್ರಮುಖ ಪದಾರ್ಥ. ಅವರ ಬೆಳವಣಿಗೆ ಪೌಷ್ಠಿಕ ಆಹಾರವಾಗಿ ಬಳಕೆ ಮಾಡುತ್ತೇವೆ. ಅಷ್ಟೇ ಅಲ್ಲದೆ.. ಮೊಸರು ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ ಎಂದು ರಾತ್ರಿ ಒಂದು ಬಾರಿಯಾದರೂ ಸೇವನೆ ಮಾಡುತ್ತೇವೆ. ಆದರೆ, ಎಲ್ಲ ದರ ಏರಿಕೆ ಮಾಡಿ ಸರ್ಕಾರ ನಮ್ಮನ್ನು ದಿವಾಳಿ ಮಾಡಲು ಹೊರಟಿದೆ ಎಂದು ಬೇಸರ ಪಟ್ಟುಕೊಂಡರು.
ಹಾಲು ಉತ್ಪಾದಕರ ಬೇಡಿಕೆಯ ಮೇರೆಗೆ ರಾಜ್ಯ ಸರ್ಕಾರವು ಇತ್ತೀಚೆಗೆ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು ಅನುಮೋದನೆ ನೀಡಿತ್ತು. ಹಾಲಿನ ದರ ಏರಿಕೆಯ ಜೊತೆಗೆ, ಕೆಎಂಎಫ್ ನವೆಂಬರ್ 1ರಿಂದ ಜಾರಿಗೆ ಬರುವಂತೆ ಮೊಸರಿನ ದರವನ್ನೂ ಪ್ರತಿ ಲೀಟರ್ಗೆ ಬರೋಬ್ಬರಿ 14 ರೂಪಾಯಿಗಳಷ್ಟು ಹೆಚ್ಚಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಕೆಎಂಎಫ್ ಮೊಸರಿನ ದರವನ್ನು 2 ರೂಪಾಯಿ ಕಡಿತಗೊಳಿಸಿತ್ತು, (ಏಜೆನ್ಸೀಸ್).