Google Ananta Bangalore 
ಬೆಂಗಳೂರು

'ಅತಿಥಿಗಳಂತೆ ನಡೆಸಿಕೊಳ್ಳುವ ಗೂಗಲ್​ ಸಂಸ್ಥೆಗೆ​ ಬರೋಕೆ ಇಷ್ಟ'; ಕಂಪನಿಯ ನಿಜವಾದ ಸಂಸ್ಕೃತಿ ಬಗ್ಗೆ Bengaluru ಕ್ಯಾಬ್​ ಡ್ರೈವರ್ ಹೇಳಿದ್ದಿಷ್ಟು

ಪ್ರಮುಖ ಮುಖ್ಯಾಂಶಗಳು

  • ಲೇಟ್​ ಆಗಿ ಬಂದರೂ ಏನೂ ಬಯ್ಯದೇ ನಗುತ್ತಾ ಪ್ರಯಾಣಿಕರನ್ನು ಸ್ವಾಗತಿಸಿದ ವ್ಯಕ್ತಿ
  • ಗೂಗಲ್​ ಕಂಪನಿಗೆ ಬರೋದು ತುಂಬಾನೆ ಇಷ್ಟದ ಕೆಲಸ ಎಂದ ಕ್ಯಾಬ್​ ಡ್ರೈವರ್​
  • ಕಂಪನಿ ಸೌಲಭ್ಯದ ಬಗ್ಗೆ ಕೇಳಬೇಕು ಎಂದರೆ ಇಲ್ಲಿನ ಕ್ಯಾಬ್​ ಡ್ರೈವರ್​ಗಳನ್ನು ಕೇಳಿ ಎಂದು ಬರೆದುಕೊಂಡ ತಾನ್ಯ.
Google Ananta Bangalore: ದೈತ್ಯ ಕಂಪನಿಗಳ ಸೌಲಭ್ಯ ಮತ್ತು ಹೊರಗಿನಿಂದ ಸಣ್ಣಪುಟ್ಟ ಕೆಲಸಕ್ಕೆಂದು ಬರುವವರಿಗೆ, ಆ ಕಂಪನಿಗಳು ಒದಗಿಸುವ ಸೇವೆ ಹಾಗೂ  ನಡೆಸಿಕೊಳ್ಳುವ ರೀತಿಯೇ ಆ ಸಂಸ್ಥೆಯ ನಿಜವಾದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂಬುದನ್ನು ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಮನವರಿಕೆ ಮಾಡಿಕೊಟ್ಟಿದೆ.
ಬ್ಯುಸಿನೆಸ್ ಸ್ಟೋರಿ ಟೆಲ್ಲರ್ ಹಾಗೂ ಸ್ಟೋರಿ ಕೋಚ್ ಆದ  ತಾನ್ಯ ಮಾಥೂರ್​​ ಭಟ್ಟಾಚಾರ್ಯ ಎಂಬುವವರು ಇತ್ತೀಚೆಗೆ  ಗೂಗಲ್‌ನ ಹೊಸ 'ಅನಂತ' (Ananta) ಕಚೇರಿಗೆ ಭೇಟಿ ನೀಡಿದ್ದಾಗ..ಕ್ಯಾಬ್​ ಚಾಲಕನೊಂದಿಗೆ ನಡೆದ ಸಂಭಾಷಣೆಯನ್ನು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿರುವುದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 

ಲೇಟಾಗಿ ಬಂದಿದ್ದಕ್ಕೆ ಸಿಟ್ಟಾಗದ ಕ್ಯಾಬ್​ ಡ್ರೈವರ್

ವಿವಿಧ ದೇಶಗಳಿಂದ ಬಂದಿದ್ದ ಆ್ಯಪ್ ಡೆವಲಪ್ಮೆಂಟ್ ಲೀಡರ್‌ಗಳಿಗಾಗಿ ಆಯೋಜಿಸಿದ್ದ ಮಾಸ್ಟರ್‌ಕ್ಲಾಸ್ ಗಾಗಿ   ತಾನ್ಯ ಮಾಥೂರ್​​ ಭಟ್ಟಾಚಾರ್ಯ  ಅಲ್ಲಿಗೆ ತೆರಳಿದ್ದರು. ಅವರ ಆತಿಥೇಯರು ಪ್ರತ್ಯೇಕ ಕ್ಯಾಬ್ ವ್ಯವಸ್ಥೆ ಮಾಡಿದ್ದರು.
ಬೆಳಗ್ಗೆ 11:30ಕ್ಕೆ ವಾಪಸ್ ಬರುವುದಾಗಿ ಡ್ರೈವರ್ ಶರತ್‌ಗೆ ತನ್ಯಾ ಹೇಳಿದ್ದರು. ಆದರೆ ಕಾಫಿ, ಮಾಸ್ಟರ್‌ಕ್ಲಾಸ್ ಹಾಗೂ ಅತಿಥಿಗಳೊಂದಿಗೆ ಊಟ ಮುಗಿಸಿ ಕೆಳಗೆ ಬರುವಷ್ಟರಲ್ಲಿ ಮಧ್ಯಾಹ್ನ 12:30 ದಾಟಿತ್ತು. ಕಾರು ಹತ್ತಿದ ಸಾರಿ ಸರ್ ತುಂಬಾನೆ  ಕಾಯಿಸಿಬಿಟ್ಟೆ ಎಂದಿದ್ದಾರೆ. ಅದಕ್ಕೆ ಮುಗುಳ್ನಕ್ಕ ಶರತ್, "ಮೇಡಂ, ನೀವು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ನನಗೆ ಧನ್ಯವಾದಗಳು. ನನಗೆ ಗೂಗಲ್‌ಗೆ ಬರುವುದು ತುಂಬಾ ಇಷ್ಟದ ಕೆಲಸ ಎಂದು ಹೇಳಿದ್ದಾರೆ. 
ಅವರು ಹಾಗೆ ಹೇಳಲು ಕಾರಣವೇನೆಂದು ತಾನ್ಯಾ ವಿಚಾರಿಸಿದಾಗ ಅಚ್ಚರಿಯ ಸಂಗತಿಗಳು ಹೊರಬಂದವು. ಗೂಗಲ್‌ನಲ್ಲಿ ಕ್ಯಾಬ್‌ಗಳಿಗಾಗಿಯೇ ಮೀಸಲಾದ ಬೇಸ್‌ಮೆಂಟ್ ಪಾರ್ಕಿಂಗ್ ವ್ಯವಸ್ಥೆಯಿದೆ. ಇಲ್ಲಿ ಡ್ರೈವರ್‌ಗಳಿಗೆ ಟೀ, ಕಾಫಿ, ಸ್ನ್ಯಾಕ್ಸ್ ಜತೆಗೆ ಮೂರು ಹೊತ್ತಿನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಾನ್ಯಾ ತಡವಾಗಿ ಬಂದ ಕಾರಣ ಶರತ್‌ಗೆ ಮುಂಚಿತವಾಗಿ ಊಟ ಮಾಡಲು ಅವಕಾಶ ಸಿಕ್ಕಿತ್ತು.

ಅತಿಥಿಗಳಂತೆ ನಡೆಸಿಕೊಳ್ತಾರೆ

ಊಟದ ವಿಚಾರವಾಗಿ ಗೂಗಲ್‌ನ ನಿಯಮವನ್ನು ಶರತ್ ಪ್ರಶಂಸಿಸಿದರು. ತಿನ್ನಲು ಆಗುವಷ್ಟು ಆಹಾರವನ್ನು ಮಾತ್ರ ಹಾಕಿಸಿಕೊಳ್ಳಬಹುದು. ಕೆಲವು ಕಂಪನಿಗಳು ಡ್ರೈವರ್‌ಗಳಿಗೆ ಊಟದ ಭತ್ಯೆ ಮಾತ್ರ ನೀಡುತ್ತವೆ, ಆದರೆ ಗೂಗಲ್‌ನಲ್ಲಿ ಅತಿಥಿಗಳಂತೆ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದ ಮಾತು ತಾನ್ಯ ಅವರಿಗೆ ಹೆಚ್ಚಾಗಿ ಹಿಡಿಸಿದೆ. 
ಈ ಘಟನೆಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ತಾನ್ಯ, ಕಂಪನಿ ಸೌಲಭ್ಯ ಹೇಗಿರುತ್ತೆ ಎನ್ನುವುದನ್ನು ಇಲ್ಲಿಗೆ ಹೊರಗಿನಿಂದ ಬರುವ ಕ್ಯಾಬ್​ ಡ್ರೈವರ್​ಗಳಿಂದ ಕೇಳಿ ತಿಳಿದುಕೊಳ್ಳಬೇಕು. ಒಂದು ಸಂಸ್ಥೆಯ ನಿಜವಾದ ಸಂಸ್ಕೃತಿ ಅಲ್ಲಿನ ಉನ್ನತ ಹುದ್ದೆಯಲ್ಲಿದ್ದವರ ಕಚೇರಿಗಳಲ್ಲಿ ಅಲ್ಲ, ಬದಲಿಗೆ ಆ ಕಂಪನಿಯೊಂದಿಗೆ ಬೆರೆಯುವ ಪ್ರತಿಯೊಬ್ಬ ವ್ಯಕ್ತಿಯ ಮುಖದ ಮೇಲಿನ ನಗುವಿನಲ್ಲಿ ಅಡಗಿರುತ್ತದೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).