land-guarantee-scheme 
ಬೆಂಗಳೂರು

ಜನರಿಗೆ ಸಿಗದ ‘ಭೂ ಗ್ಯಾರಂಟಿ’ ಯೋಜನೆ ಲಾಭ

ಪ್ರಮುಖ ಮುಖ್ಯಾಂಶಗಳು

  • ಬಿ ಟು ಎ ಖಾತಾ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಇಂದೇ ಕೊನೇ ದಿನ
  • ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ ಪುನರಾರಂಭಕ್ಕೆ ಜನರ ಒತ್ತಾಯ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ನಗರ ಪಾಲಿಕೆಗಳ ಆಸ್ತಿ ಮಾಲೀಕರಿಗೆ ಸರ್ಕಾರ ಘೋಷಿಸಿದ್ದ ಭೂ ಗ್ಯಾರಂಟಿ ಯೋಜನೆ ಕುಂಟುತ್ತಾ ಸಾಗಿದ್ದು, ಸಾರ್ವಜನಿಕರಿಗೆ ಸೌಲಭ್ಯ ಸಿಗದೆ ಸಮಸ್ಯೆಯಾಗುತ್ತಿದೆ. ಜನಗಣತಿಗಾಗಿ ಮನೆ ಸಮೀಕ್ಷೆ, ಎಸ್‌ಐಆರ್ ಹಾಗೂ ಇನ್ನಿತರ ಕಾರ್ಯಕ್ರಮಗಳ ಭಾರದಿಂದ ಪಾಲಿಕೆಗಳು ಸಾರ್ವಜನಿಕರಿಗೆ ಸೌಲಭ್ಯ ತಲುಪಿಸಲು ಸಾಧ್ಯವಾಗದೆ ವಿಫಲವಾಗಿವೆ.

ಕಳೆದ ಮೇ 16ರಂದು ಆಗಿನ ಡಿಸಿಎಂ ಡಿ.ಕೆ. ಶಿವಕುಮಾರ್ 6ನೇ ಗ್ಯಾರಂಟಿ ಘೋಷಿಸಿ 100 ದಿನಗಳಲ್ಲಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದರು. ಈ ಭೂ ಗ್ಯಾರಂಟಿಯು ನಗರದ 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಡಿಜಿಟಲೀಕರಣ ಮಾಡಿದ ದಾಖಲೆಗಳನ್ನು ಇ-ಖಾತಾ ರೂಪದಲ್ಲಿ ತಲುಪಿಸುವ ಗುರಿಯಾಗಿತ್ತು. ಜತೆಗೆ ಬಿ ಖಾತಾ ಸೈಟ್‌ಗಳಿಗೆ ಎ ಖಾತಾ ದಾಖಲೆ ನೀಡುವ ಬೃಹತ್ ಕಾರ್ಯಕ್ರಮವೂ ಸೇರಿತ್ತು. ಆದರೆ, ದಿನಕಳೆದಂತೆ ಪಾಲಿಕೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನ್ಯ ಕಾರ್ಯದತ್ತ ದೃಷ್ಟಿ ಹರಿಸಿದ ಪರಿಣಾಮ ಭೂ ಗ್ಯಾರಂಟಿ ಹಳ್ಳ ಹಿಡಿದಿದೆ.
ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ ಅಡಿಯಲ್ಲಿ ತಿಂಗಳ 2 ಮತ್ತು 4ನೇ ಶನಿವಾರದಂದು ಐದೂ ಪಾಲಿಕೆಗಳ 50 ಸ್ಥಳಗಳಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಇದು ಮೊದಲ ತಿಂಗಳು ಸರಾಗವಾಗಿ ನಡೆದರೂ, ನಂತರದಲ್ಲಿ ಅರ್ಜಿ ಸ್ವೀಕಾರ ಹಾಗೂ ವಿಲೇವಾರಿ ತಡವಾಗಿದ್ದರಿಂದ ಜನರು ಪಾಲಿಕೆಯತ್ತ ಮುಖ ಮಾಡಲಿಲ್ಲ. ಈ ವೇಳೆಯಲ್ಲೇ ಜನಗಣತಿಗಾಗಿ ಮನೆ ಮನೆ ಸಮೀಕ್ಷೆ, ಎಸ್​​ಐಆರ್​​ಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ ಪರಿಣಾಮ ಖಾತಾ ವಿತರಣೆ ಹಳಿ ತಪ್ಪಿತು. ಶುಲ್ಕ ಪಾವತಿಸಿದರೂ, ಸೌಲಭ್ಯ ನೀಡದ ಪಾಲಿಕೆ ವಿರುದ್ಧ ಜನಾಕ್ರೋಶ ಹೆಚ್ಚಿದರೂ, ಜಿಬಿಎ ತಲೆಕೆಡಿಸಿಕೊಳ್ಳಲಿಲ್ಲ. ಇದರ ಬೆನ್ನಲ್ಲೇ ಎಸ್‌ಐಆರ್‌ಗೆ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಿದ ಕಾರಣ ಕಂದಾಯ ಕಚೇರಿಗಳಲ್ಲಿ ಕಡತ ವಿಲೇವಾರಿ ಸ್ಥಗಿತಗೊಂಡಿದೆ.

ಗಡುವು ವಿಸ್ತರಿಸಲು ಜನರ ಆಗ್ರಹ:

ಬಿ ಟು ಎ ಖಾತಾ ಯೋಜನೆಯು 7.5 ಲಕ್ಷ ನಿವೇಶನಗಳಿಗೆ ಸಂಬಂಧಿಸಿದ್ದಾಗಿದೆ. ಈ ಪೈಕಿ ಈವರೆಗೆ 50 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಮಾರ್ಗಸೂಚಿ ದರದ ಶೇ.5ರ ಬದಲು ಶೇ.2 ಶುಲ್ಕ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಜನರಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ. ಬಹುತೇಕ ಮಂದಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಾದರೂ, ಸೌಲಭ್ಯ ಸಿಗುತ್ತಿಲ್ಲ. ಎಆರ್‌ಒ ಕಚೇರಿಗಳಲ್ಲಿ ಅಧಿಕಾರಿಗಳು ಸ್ಪಂದಿಸದಿರುವುದು, ದಾಖಲೆಗಳನ್ನು ಅನಗತ್ಯವಾಗಿ ತಿರಸ್ಕರಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಸೌಲಭ್ಯ ನೀಡದಿರುವುದು ನಾಗರಿಕರನ್ನು ಹೈರಾಣವಾಗಿಸಿದೆ. ಜತೆಗೆ ಸರ್ವರ್ ಸಮಸ್ಯೆ ಮತ್ತೊಂದು ಅಡ್ಡಿಯಾಗಿದ್ದು, ಸಾಫ್ಟ್​​​ವೇರ್‌ನಲ್ಲಿರುವ ತಾಂತ್ರಿಕ ತಂದರೆಯನ್ನು ನಿವಾರಿಸಲು ಇನ್ನೂ ಸಾಧ್ಯವಾಗಿಲ್ಲ. ಕಳೆದ 15 ದಿನಗಳಿಂದ ಈ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಒಂದೂ ಅರ್ಜಿಯೂ ವಿಲೇವಾರಿ ಆಗಿಲ್ಲ. ಜತೆಗೆ ಅರ್ಜಿ ಸಲ್ಲಿಸಿ ಗಡುವು ಮೀರಿದರೂ, ಸೌಲಭ್ಯವನ್ನು ನೀಡದಿರುವುದು ಏಕೆ ಎಂದು ಸಾವಿರಾರು ನಾಗರಿಕರು ಪಾಲಿಕೆಯನ್ನು ಪ್ರಶ್ನಿಸತೊಡಗಿದ್ದಾರೆ. ಪಾಲಿಕೆ/ಜಿಬಿಎ ತಪ್ಪಿನಿಂದ ಗಡುವಿನೊಳಗೆ ಸೌಲಭ್ಯ ಪಡೆಯಲು ಸಾಧ್ಯವಾಗದ ಕಾರಣ ಗಡುವನ್ನು ಇನ್ನೂ ಕೆಲ ತಿಂಗಳು ಮುಂದುವರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಬೀಳದ ಬ್ರೇಕ್:

ಎಆರ್‌ಒ ಕಚೇರಿಗಳು ಖಾತಾ ನೀಡುವ ಪ್ರಮುಖ ಕಚೇರಿಗಳಾಗಿವೆ. ಇಲ್ಲಿನ ಭ್ರಷ್ಟಾಚಾರ ವ್ಯವಸ್ಥೆಯನ್ನು ನಿವಾರಿಸಲೆಂದೇ ಆನ್‌ಲೈನ್ ವ್ಯವಸ್ಥೆಯನ್ನು ಜಿಬಿಎ ತಂದಿದೆ. ಆದರೆ, ತಾಂತ್ರಿಕ ನೆಪವೊಡ್ಡಿ ಸೌಲಭ್ಯ ನೀಡಲು ಅಧಿಕಾರಿ, ಸಿಬ್ಬಂದಿ ತಡಮಾಡುತ್ತಿದ್ದಾರೆ. ಮಧ್ಯವರ್ತಿಗಳ ಮುಲಕ ಹೋದಲ್ಲಿ ಬೇಗನೆ ಕೆಲಸ ಆಗುತ್ತದೆ. ಲಂಚ ನೀಡದೆ ಯಾವ ಕೆಲಸವೂ ಆಗದು ಎಂಬ ದೂರು ಜನರಿಂದ ಕೇಳಿಬಂದಿದೆ. ಈ ಸಮಸ್ಯೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಬಿಎ ಮುಖ್ಯ ಆಯುಕ್ತರು, ಪಾಲಿಕೆ ಕಮಿಷನರ್‌ಗಳು ಹಾಗೂ ಸಚಿವರ ಹೇಳಿಕೆ ಕಾಗದ ಮೇಲೆ ಉಳಿದಿರುವುದು ಖಾತಾ ಸೌಲಭ್ಯ ಜನರಿಗೆ ಲಭ್ಯವಾಗುತ್ತಿಲ್ಲ ಎಂದು ಹಲವು ನಾಗರಿಕ ಸಂಘಟನೆಗಳು ದೂರಿವೆ.
"

ಜಿಬಿಎ ಆರಂಭಿಸಿರುವ ಅಭಿಯಾನ ಜನರಿಗೆ ಅನುಕೂಲವಾಗಿದೆ. ಆದರೆ, ಅರ್ಜಿ ವಿಲೇವಾರಿ ವೇಳೆ ದೊಡ್ಡ ಮೊತ್ತದ ಹಿಡನ್ ಚಾರ್ಜ್‌ಗಳನ್ನು ಸೇರಿಸಿ ಬಿ ಟು ಎ ಖಾತಾ ಪಡೆಯಲು ಲಕ್ಷಾಂತರ ರೂ. ವ್ಯಯಿಸಬೇಕಾದ ಸ್ಥಿತಿಗೆ ಅಧಿಕಾರಿಗಳು ತಂದಿಟ್ಟಿದ್ದಾರೆ. ಇದರ ಬದಲು ಪಾರದರ್ಶಕ ಹಾಗೂ ಜನಸ್ನೇಹಿ ಮಾದರಿಯಲ್ಲಿ ಜನರಿಗೆ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ಬಿ ಖಾತಾದಾರರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಲಿದೆ.

- ಎನ್.ಆರ್. ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ