tree-clearance 
ಬೆಂಗಳೂರು

ಮರ ತೆರವು ಪ್ರಸ್ತಾವನೆ ಹಿಂಪಡೆದ ಬಿಡಿಎ

ಪ್ರಮುಖ ಮುಖ್ಯಾಂಶಗಳು

  • ನಾಗರಿಕರ ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸಿದ ಪ್ರಾಧಿಕಾರ
  • ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಯೋಜನೆ
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಜಾಗದಲ್ಲಿ ಹೊಸದಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಲ್ಲಿರುವ 184 ಮರಗಳನ್ನು ತೆರವುಗೊಳಿಸುವುದಕ್ಕೆ ಸಾರ್ವಜನಿಕರು ಹಾಗೂ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಪ್ರಾಧಿಕಾರವು ಮರಗಳನ್ನು ಕತ್ತರಿಸಲು ಕೋರಿ ಜಿಬಿಎಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂಪಡೆದಿದೆ.
ಬಿಡಿಎ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ಜಿಬಿಎ ಅರಣ್ಯ ವಿಭಾಗವು ಮರ ತೆರವುಗೊಳಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಯನ್ನು ಕೋರಿತ್ತು. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳು ಹಾಗೂ ಪರಿಸರ ಸಂಘಟನೆಗಳು ಬಿಡಿಎ ಮತ್ತು ಜಿಬಿಎ ನಡೆಯನ್ನು ಟೀಕಿಸಿ ಪ್ರತಿಭಟನೆ ಕೈಗೊಂಡಿದ್ದವು. ಒಂದೇ ಬಾರಿ ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ತೆರವುಗೊಳಿಸುವ ಪ್ರಸ್ತಾವನೆಯಲ್ಲಿ ಸ್ವೀಕರಿಸುವ ಬದಲು ಆಗಲೇ ತಿರಸ್ಕರಿಸಬೇಕಿತ್ತು ಎಂದು ಪರಿಸರ ತಜ್ಞರು ದನಿಯೆತ್ತಿದ್ದರು. ಇದಕ್ಕೆ ನಗರದ ವಿವಿಧ ಪರಿಸರವಾದಿಗಳು ಬೆಂಬಲಿಸಿದ್ದರಿಂದ ಪ್ರತಿಭಟನೆಯ ಕಾವು ಏರಿತ್ತು. ಇದನ್ನು ಅರಿತ ಬಿಡಿಎ ಆಯುಕ್ತರು ಜಿಬಿಎ ಅರಣ್ಯ ಘಟಕಕ್ಕೆ ಪತ್ರ ಬರೆದು ಮರ ಕತ್ತರಿಸುವ ಪ್ರಸ್ತಾವನೆಯನ್ನು ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಆಯುಕ್ತರ ಗಮನಕ್ಕೆ ತಾರದೆ ಪ್ರಸ್ತಾವನೆ ಸಲ್ಲಿಕೆ:

ಎಚ್‌ಎಸ್‌ಆರ್ ಲೇಔಟ್ ಕಾಂಪ್ಲೆಕ್ಸ್ ಅನ್ನು ಮರುನಿರ್ಮಿಸಲು ಅಲ್ಲಿರುವ ಮರಗಳನ್ನು ತೆರವುಗೊಳಿಸಲು ಅನುಮತಿ ಕೋರಿ ಬಿಡಿಎ ಮಾರುಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ (ಇಇ) ಜಿಬಿಎ ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ವಿಷಯವನ್ನು ಸ್ವತಃ ಆಯುಕ್ತರು ಜಿಬಿಎ ಅರಣ್ಯ ಘಟಕದ ಡಿಸಿಎಫ್​​ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪ್ರಾಧಿಕಾರದ ಅಧ್ಯಕ್ಷರು ಯಾವುದೇ ಯೋಜನೆ ಕೈಗೊಂಡರೂ ಮರಗಳನ್ನು ತೆರವುಗೊಳಿಸದೆ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಹಾಗಾಗಿ ಉದ್ದೇಶಿತ ಮರಗಳ ತೆರವು ಪ್ರಸ್ತಾವನೆಯನ್ನು ಹಿಂಪಡೆಯಲಾಗುತ್ತಿದ್ದು, ಇದಕ್ಕೆ ಅನುಮತಿ ಕೋರಿದ್ದಾರೆ.
ಬಿಡಿಎ ಆಯುಕ್ತರು ಬರೆದಿರುವ ಪತ್ರಕ್ಕೆ ಜಿಬಿಎಯಿಂದ ಇನ್ನಷ್ಟೇ ಮಾರುತ್ತರ ರವಾನೆಯಾಗಬೇಕಿದೆ. ಅಲ್ಲದೆ, ಈಗಾಗಲೇ ಜಿಬಿಎ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದರಿಂದ ಅದನ್ನು ವಾಪಸ್ ಪಡೆದು ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ಪ್ರಸ್ತಾವನೆ ಹಿಂಪಡೆಯಲು ಅನುಮತಿ ನೀಡಲಾಗುತ್ತದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

ತಾತ್ಕಾಲಿಕ ಮಳಿಗೆಗಳಿಗಾಗಿ ಮರಕ್ಕೆ ಕೊಡಲಿ:

ಎಚ್‌ಎಸ್‌ಆರ್ ಲೇಔಟ್ ಕಾಂಪ್ಲೆಕ್ಸ್ ಆವರಣದಲ್ಲಿ ಹೊಸದಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದಕ್ಕಾಗಿ ಹಾಲಿ ಅಲ್ಲಿದ್ದ ಮಳಿಗೆದಾರರನ್ನು ತೆರವುಗೊಳಿಸಲಾಗಿದೆ. ಅವರಿಗಾಗಿ ತಾತ್ಕಾಲಿಕ ಮಳಿಗೆಗಳನ್ನು ಕಾಂಪ್ಲೆಕ್ಸ್ ಆವರಣದ ಕಾಂಪೌಂಡ್ ಬಳಿ ನಿರ್ಮಿಸಲಾಗುತ್ತಿದೆ. ಅಲ್ಲಿ ಹಲವು ಮರಗಳಿದ್ದು, ಅವುಗಳನ್ನು ತೆರವು ಮಾಡದೆ ಮಳಿಗೆಗಳನ್ನು ಪೂರ್ಣಗೊಳಿಸಲಾಗದು. ಹಾಗಾಗಿ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಮಳಿಗೆ ನಿರ್ಮಿಸಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿಖರ ಮಾಹಿತಿ ನೀಡದ ಬಿಡಿಎ:

ಬಿಡಿಎ ಮಾರುಕಟ್ಟೆ ವಿಭಾಗದ ಇಇ ಅವರು ಜಿಬಿಎಗೆ ಬರೆದಿರುವ ಪತ್ರದಲ್ಲಿ ಮರಗಳ ಸಂಖ್ಯೆ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಇಇ ಪ್ರಕಾರ ಕಾಂಪ್ಲೆಕ್ಸ್ ಆವರಣದಲ್ಲಿ 143 ಮರಗಳಿವೆ. ಇವುಗಳಲ್ಲಿ 49 ಮರಗಳನ್ನು ಮಾತ್ರ ತೆರವುಗೊಳಿಸುತ್ತಿದ್ದು, ಇತರ 12 ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಅಲ್ಲದೆ ಹೊಸ ವಾಣಿಜ್ಯ ಸಂಕೀರ್ಣದ ನಕ್ಷೆಗೆ ಅಡ್ಡಿಯಾಗದಂತೆ ಇತರ 82 ಮರಗಳನ್ನು ಆವರಣದಲ್ಲಿಯೇ ಉಳಿಸಿಕೊಳ್ಳುವ ಪ್ರಸ್ತಾಪ ಇದೆ ಎಂಬುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದರು. ಆದರೆ, ಮಳಿಗೆ ನಿರ್ಮಿಸುವ ಜಾಗದಲ್ಲಿರುವ ಮರಗಳ ಸಂಖ್ಯೆಯನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿಲ್ಲ. ಹಾಗಾಗಿ ಪ್ರಾಧಿಕಾರಕ್ಕೆ ಮರಗಳ ತೆರವು ವಿಚಾರದಲ್ಲಿ ನಿಖರತೆ ಇಲ್ಲ ಎಂದು ಪರಿಸರವಾದಿಗಳು ಆಕ್ಷೇಪಿಸಿದ್ದಾರೆ.