ನಾಗದೇವನಹಳ್ಳಿಯ ನಿವಾಸಿವಿದ್ಯಾರ್ಥಿ ಯೋಗೇಶ್ ಪಿ. (19) ಹತ್ಯೆಗೀಡಾದ ದುರ್ದೈವಿ.
ನಾಗರಭಾವಿಯ ದೀಪಾ ಕಾಂಪ್ಲೆಕ್ಸ್ ಬಳಿಯ ಖಾಸಗಿ ಕಾಲೇಜಿನ ಬಳಿ ನಡೆದ ಘಟನೆ
ತರಗತಿಯಿಂದ ಹೊರಬಂದ ಯುವಕನ ಮೇಲೆ ಏಕಾಏಕಿ ದಾಳಿ, ದೂರು ದಾಖಲು
ಬೆಂಗಳೂರು: ಇಲ್ಲಿನ ನಾಗರಬಾವಿ ಬಳಿ ಇರುವ ಖಾಸಗಿ ಕಾಲೇಜೊಂದರ ಬಳಿ 19 ವರ್ಷದ ವಿದ್ಯಾರ್ಥಿ ಮೇಲೆ ಆರು ಜನರ ಗುಂಪು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಾಗದೇವನಹಳ್ಳಿ ನಿವಾಸಿಯಾದ 19 ವರ್ಷದ ಬಿ.ಕಾಮ್ ವಿದ್ಯಾರ್ಥಿ ಯೋಗೇಶ್ ಪಿ ಎಂಬುವವರು ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಆರು ಜನರಿದ್ದ ಗುಂಪಿನಲ್ಲಿ ಯೋಗೇಶ್ ಸಹಪಾಠಿ ಇದ್ದು, ಆತನಿಂದಲೇ ಕೃತ್ಯ ನಡೆದಿದೆ. ಸದ್ಯ ಆರೋಪಿಗಳು ನಾಪತ್ತೆಯಾಗಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾಪರೆಡ್ಡಿ ಪಾಳ್ಯದ ಖಾಸಗಿ ಕಾಲೇಜಿನಲ್ಲಿ ಯೋಗೇಶ್ ಬಿಕಾಂ ಓದುತ್ತಿದ್ದ. ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ಯೋಗೇಶ್ ಕಾಲೇಜು ಮುಗಿಸಿಕೊಂಡು ತನ್ನ ಸ್ನೇಹಿತನೊಂದಿಗೆ ಕಾಲೇಜಿನ ಹಿಂಭಾಗದ ರಸ್ತೆಯ ಮೂಲಕ ಮನೆಗೆ ತೆರಳುತ್ತಿದ್ದ. ಈ ವೇಳೆ ಅವರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಯೋಗೇಶ್ ಕ್ಲಾಸ್ ಮೇಟ್ ಸಹ ಆ ಗುಂಪಿನಲ್ಲಿದ್ದ ಎನ್ನಲಾಗಿದೆ.
ಯೋಗೇಶ್ ಮತ್ತು ಸಹಪಾಠಿಯೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಬುಧವಾರ ಸಹ ಇಬ್ಬರ ನಡುವೆ ವಾಗ್ವಾದ, ಕಿತ್ತಾಟ ಜೋರಾಗಿಯೇ ನಡೆದಿತ್ತು. ಇದೇ ಸಿಟ್ಟಿನಲ್ಲಿದ್ದ ಯುವಕ ಲಗ್ಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ಥಳೀಯರನ್ನು ಕಡೆದುಕೊಂಡು ಬಂದು ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ನೆಲಕ್ಕೆ ಬಿದ್ದಿದ್ದ ಯೋಗೇಶ್ನನ್ನು ಮತ್ತೊಬ್ಬ ಸ್ನೇಹಿತ ಬೈಕ್‌ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ದಾಳಿಯ ನಂತರ ಆ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಯೋಗೇಶ್ ಅವರ ತಂದೆ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆತನ ಸಹಪಾಠಿ ಭುವನ್ ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಯತೀಶ್ ಎನ್ ಮಾತನಾಡಿ, ಯೋಗೇಶ್ಗೆ ಇರಿದು ಪರಾರಿಯಾಗಿರುವವರನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯೋಗೇಶ್ ಜತೆಗೆ ಕಾಲೇಜಿನ ಹೊರಗಿನ ಲಗ್ಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಯುವಕರು ಭಾಗಿಯಾಗಿದ್ದಾರೆ. ಯೋಗೇಶ್ಗೆ ಪರಿಚಯ ಇರುವ ಯುವತಿ ವಿಚಾರಕ್ಕೆ ಮತ್ತು ಇತರ ವಿಷಯಗಳಿಗೆ ಈ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).