pop-ganesha-idols 
ಬೆಂಗಳೂರು

ರಾಜಧಾನಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ನಿಷೇಧ

ಪ್ರಮುಖ ಮುಖ್ಯಾಂಶಗಳು

  • ಜಿಬಿಎನ ಎಫ್​​ಇಸಿಸಿ ವಿಭಾಗದಿಂದ ಸುತ್ತೋಲೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್​ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳ ತಯಾರಿಕೆ, ಸಂಗ್ರಹ, ಮಾರಾಟ ಮತ್ತು ವಿಸರ್ಜನೆಯನ್ನು ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ (ಎಫ್​ಇಸಿಸಿ) ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ಸುತ್ತೋಲೆ ಹೊರಡಿಸಿದ್ದಾರೆ.

ನೀರಿನ ಯಾವುದೇ ಮೂಲಗಳು ಮಾಲಿನ್ಯಕ್ಕೆ ಒಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರ ಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತವಾದ ಯಾವುದೇ ರೀತಿಯ ಪಿಒಪಿ ಗಣೇಶ ಮೂರ್ತಿಗಳು ಹಾಗೂ ನೀರಿನ ಮೂಲಗಳಲ್ಲಿ ವಿಸರ್ಜಿಸನೆ ಮಾಡುವುದನ್ನು ರಾಜ್ಯಾದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ (5) ಅಡಿಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿ ಅದರನ್ವಯ ಸರ್ಕಾರವು 2023ರ ಸೆ.15ರಲ್ಲಿ ಆದೇಶ ಹೊರಡಿಸಿದ್ದು, ಇದು ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಗಣೇಶ ಚತುರ್ಥಿ ಹಬ್ಬದ ವೇಳೆ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ಪಿಒಪಿ, ಇತರ ಕೃತಕ ಪದಾರ್ಥಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಹಾಗೂ ಇತರ ಮೂರ್ತಿಗಳ ಉತ್ಪಾದನೆ, ಮಾರಾಟ ಮತ್ತು ಯಾವುದೇ ನೀರಿನ ಮೂಲಗಳಲ್ಲಿ ಅವುಗಳನ್ನು ವಿಸರ್ಜಿಸುವುದನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರದ ಪರಿಸರ ಸಂಗಕ್ಷಣಾ ಕಾಯ್ದೆ 1986ರ ಉಲ್ಲಂಘನೆ ದಂಡನೀಯ ಅಪರಾಧವಾಗಿದೆ. ಇದರ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ.