pop-ganesha-idols-ban 
ಬೆಂಗಳೂರು

ಈ ವರ್ಷವೂ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ

ಪ್ರಮುಖ ಮುಖ್ಯಾಂಶಗಳು

  • ಪರಿಸರಸ್ನೇಹಿ ಗಣೇಶೋತ್ಸವ ಆಚರಣೆಗೆ ಮುಖ್ಯ ಆಯುಕ್ತರ ಮನವಿ
  • ಜಿಬಿಎ, ಪೊಲೀಸ್ ಇಲಾಖೆಯಿಂದ ಜಂಟಿ ಶಾಂತಿ ಸೌಹಾರ್ದ ಸಭೆ
ಬೆಂಗಳೂರು: ನಗರದಲ್ಲಿ ಈ ವರ್ಷವೂ ಪ್ಲಾಸ್ಟರ್ ಆಫ್​ ಪ್ಯಾರಿಸ್ (ಪಿಒಪಿ) ನಿಂದ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಸಾರ್ವಜನಿಕರು ಪರಿಸರಸ್ನೇಹಿ ಮೂರ್ತಿಗಳನ್ನೇ ಬಳಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಮನವಿ ಮಾಡಿದ್ದಾರೆ.
ಗೌರಿ ಗಣೇಶೋತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಜಿಬಿಎ ಹಾಗೂ ನಗರ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಮಂಗಳವಾರ ಪುರಭವನದಲ್ಲಿ ಆಯೋಜಿಸಿದ್ದ ಶಾಂತಿ ಸೌಹಾರ್ದತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಿಒಪಿಯಿಂದ ತಯಾರಿಸಲಾದ ಗಣೇಶ ಮೂರ್ತಿಗಳ ಬಳಕೆಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಸಂಪೂರ್ಣವಾಗಿ ನಿಷೇಧಿಸಿದೆ. ಹಾಗಾಗಿ ನಾಗರಿಕರು ಗಣೇಶೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು. ಗಣೇಶೋತ್ಸವವು ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಠಾಣಾವಾರು ಪಾಲಿಕೆ, ಪೊಲೀಸ್ ಹಾಗೂ ಬೆಸ್ಕಾಂ ಅಧಿಕಾರಿಗಳು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ತಡವಾಗಿ ಬಂದರೂ ವಿಸರ್ಜನೆಗೆ ಅವಕಾಶ:

ಕೆರೆಗಳ ಬಳಿಯಿರುವ ಕಲ್ಯಾಣಿಗಳನ್ನು ಬೇಗ ಮುಚ್ಚಲಾಗುತ್ತದೆ ಎಂಬ ನಾಗರಿಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ಈ ಬಾರಿ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ತಡವಾಗಿ ಬಂದರೂ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕಲ್ಯಾಣಿಗಳ ಹೊರತಾಗಿ ಬೇರೆ ಸ್ಥಳಗಳಲ್ಲಿ ವಿಸರ್ಜನಾ ವ್ಯವಸ್ಥೆಗೆ ಮನವಿ ಬಂದಲ್ಲಿ, ಅಲ್ಲಿಯೂ ಅವಕಾಶ ಮಾಡಿಕೊಡಲಾಗುವುದು ಎಂದು ಮಹೇಶ್ವರ ರಾವ್ ವಿವರಿಸಿದರು.

ಪೊಲೀಸ್ ಬಂದೋಬಸ್ತ್‌ಗೆ ಕ್ರಮ:

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಆಚರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಾರ್ವಜನಿಕರು ಯಾವುದೇ ರೀತಿಯ ತೊಂದರೆ ಅನುಭವಿಸದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.
ಗಣೇಶೋತ್ಸವದ ಮೆರವಣಿಗೆಯನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭಿಸುವುದು ಅತ್ಯಂತ ಮುಖ್ಯವಾಗಿದೆ. ಸಂಚಾರ ಸಿಕ್ಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೆರವಣಿಗೆಯ ಮಾರ್ಗ ಹಾಗೂ ಸಮಯದ ಕುರಿತು ಅಗತ್ಯ ನಿರ್ದೇಶನ ನೀಡಲಿದ್ದು, ಇವುಗಳನ್ನು ಸಂಘಟಕರು ಹಾಗೂ ಸಾರ್ವಜನಿಕರು ಪಾಲಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳಾದ ಆರ್.ಲತಾ, ನವೀನ್ ಕುಮಾರ್ ರಾಜು, ನಗರ ಪೊಲೀಸ್ ಸಂಚಾರಿ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ, ಬೆಸ್ಕಾಂ, ಕೆಎಸ್‌ಪಿಸಿಬಿ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಆಯೋಜಕರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.

ಏಕಗವಾಕ್ಷಿ ಕೇಂದ್ರಗಳ ವ್ಯವಸ್ಥೆ:

ಜಿಬಿಎ ವ್ಯಾಪ್ತಿಯ ಐದು ಕಾರ್ಪೋರೇಷನ್‌ಗಳ ಉಪವಿಭಾಗ ಕಚೇರಿಗಳಲ್ಲಿ ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಕೇಂದ್ರಗಳ ವಿಳಾಸ ಹಾಗೂ ನೋಡಲ್ ಅಧಿಕಾರಿಗಳ ವಿವರಗಳನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿರುವವರು ಏಕಗವಾಕ್ಷಿ ಕೇಂದ್ರಕ್ಕೆ ಭೇಟಿ ನೀಡಿ ಒಂದೇ ಸ್ಥಳದಲ್ಲಿ ಅಗತ್ಯ ಅನುಮತಿ ಪಡೆಯಬಹುದಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು.

ಮೆರವಣಿಗೆ ವೇಳೆ ಮದ್ಯಪಾನಕ್ಕೆ ಕಡಿವಾಣ:

ಗಣೇಶೋತ್ಸವದ ಮೆರವಣಿಗೆಯಲ್ಲಿ ಮದ್ಯಪಾನ ಮಾಡಿ ಭಾಗವಹಿಸುವವರ ಬಗ್ಗೆ ಸ್ವಯಂಸೇವಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ವಯಂಸೇವಕರು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸಿದರೆ ಗಣೇಶೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಸಭೆಯಲ್ಲಿ ನಾಗರಿಕರಿಂದ ಬಂದ ಪ್ರಮುಖ ಸಲಹೆ:

* ಕೆಲವು ಕೆರೆ, ಕಲ್ಯಾಣಿಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಿದ್ದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ತಾತ್ಕಾಲಿಕ ಕಲ್ಯಾಣಿ ನಿರ್ಮಿಸಬೇಕು.
* ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡುವುದು ಬೇಡ.
* ಗಣೇಶ ವಿಸರ್ಜನೆಯ ವೇಳೆ ಮದ್ಯಪಾನವನ್ನು ಕಡ್ಡಾಯವಾಗಿ ನಿಷೇಧಿಸಬೇಕು.
* ಧ್ವನಿವರ್ಧಕಗಳ ಬಳಕೆಯ ಸಮಯದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು.
* ಮೆರವಣಿಗೆಯ ವೇಳೆ ಅನಧಿಕೃತ ಕೇಬಲ್‌ಗಳಿಂದ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.
* ಗಣೇಶ ವಿಸರ್ಜನಾ ಮಾರ್ಗಗಳಲ್ಲಿ ರಸ್ತೆ ದುರಸ್ತಿ, ವಿದ್ಯುತ್ ದೀಪಗಳನ್ನು ಸರಿಪಡಿಸಬೇಕು.
* ಮೆರವಣಿಗೆಯ ವೇಳೆ ಸಂಚಾರ ದಟ್ಟಣೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.